ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ಪಡೆಯಲು ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ನಕಲಿ ಆಧಾರ್ ಸಂಖ್ಯೆ ಜೋಡಿಸಿದ ಪ್ರಕರಣಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪತ್ತೆ ಹಚ್ಚಿದೆ.
ಬೆಂಗಳೂರಿನ ಕೆಲವು ನ್ಯಾಯ ಬೆಲೆ ಅಂಗಡಿಗಳಿಗೆ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿದ ವೇಳೆ ಈ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ಉತ್ತರ ತಾಲ್ಲೂಕಿನ ಅರುಣ ವೀರಪುರ ನ್ಯಾಯಬೆಲೆ ಅಂಗಡಿಯಲ್ಲಿ 708 ನಕಲಿ ಕಾರ್ಡ್‌ಗಳು ಪತ್ತೆ ಆಗಿವೆ. ಈ ಎಲ್ಲ ಕಾರ್ಡ್‌ಗಳಿಗೆ ಒಂದೇ ಆಧಾರ್ ಸಂಖ್ಯೆ ಜೋಡಿಸಲಾಗಿದೆ. ಯಶ್ಪಾಲ್ ಎಂಬವರ ಆಧಾರ್ ಸಂಖ್ಯೆ ಇದಾಗಿದ್ದು, ರೇಷನ್ ಕೂಪನ್ ವಿತರಿಸುವ ಹೊಣೆಯನ್ನು ಈ ವ್ಯಕ್ತಿಗೆ ನೀಡಲಾಗಿತ್ತು. ಅಲ್ಲದೆ, ಈತ ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕನ ಸಂಬಂಧಿಕ ಕೂಡಾ ಆಗಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ 1.60 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ನಕಲಿ ಆಧಾರ್ ಸಂಖ್ಯೆ ಜೋಡಿಸಲಾಗಿದೆ. ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿದಾರರು ಪರಸ್ಪರ ಕೈಜೋಡಿಸಿ, ಈ ರೀತಿ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ ದೊಡ್ಡ ಮಟ್ಟದ ಅವ್ಯವಹಾರ ನಡೆಸಿರುವುದು ಇದರಿಂದ ಬಹಿರಂಗಗೊಂಡಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದರು.
‘ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ (ಯುಐಡಿಎಐ) ನೆರವು ಪಡೆದು ಆಧಾರ್ ಡಾಟಾಗಳನ್ನು ಮರುಪರಿಶೀಲಿಸುವ ಕಾರ್ಯವನ್ನೂ ಮಾಡಲಾಗುವುದು’ ಎಂದು ಅವರು ತಿಳಿಸಿದರು.
‘ಶೇ 98ರಷ್ಟು ಬಿಪಿಎಲ್ ಕಾರ್ಡ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸಲಾಗಿದೆ ಎಂದು ಹೇಳಿಕೊಳ್ಳುವಷ್ಟರಲ್ಲಿ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಆಧಾರ್ ಜೋಡಿಸಿದ ಚೀಟಿಗಳ ಬಗ್ಗೆಯೂ ಸಂದೇಹ ಬರುವಂತಾಗಿದೆ. ರಾಜ್ಯದಲ್ಲಿ ಸದ್ಯ 1.05 ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ. ಆಧಾರ್ ಕಾರ್ಡ್ ಜೋಡಿಸುವ ಕಾರ್ಯ ಆರಂಭಿಸುವುದಕ್ಕೂ ಮೊದಲು ಈ ಸಂಖ್ಯೆ 1.09 ಕೋಟಿಯಷ್ಟಿತ್ತು. ಬಿಪಿಎಲ್ ಕಾರ್ಡ್‌ಗೆ ಪ್ರತಿ ತಿಂಗಳು ಸರಾಸರಿ ₹ 800 ಸಹಾಯಧನ ಲಭ್ಯವಾಗುತ್ತದೆ’ ಎಂದರು.
ಬೋಗಸ್ ಪಡಿತರ ಚೀಟಿಗಳಿಗೆ 12 ಅಂಕಿಯ ನಕಲಿ ಆಧಾರ್ ಸಂಖ್ಯೆಯನ್ನು ಜೋಡಿಸುವ ಮೂಲಕ ಅಪರಾಧ ಎಸಗಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿಗಳ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಆಹಾರ ನಿರೀಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತದೆ ಎಂದೂ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಾತ್ರ 300 ನ್ಯಾಯಬೆಲೆ ಅಂಗಡಿಗಳಲ್ಲಿ ಸುಮಾರು 45 ಸಾವಿರ ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳ ತಂಡ ಬೋಗಸ್ ಕಾರ್ಡ್‌ಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದೂ ಹರ್ಷ ಗುಪ್ತಾ ತಿಳಿಸಿದರು.
Comments are closed.