ಕರ್ನಾಟಕ

ಪಾತಾಳಕ್ಕೆ ಇಳಿದ ಈರುಳ್ಳಿ ಬೆಲೆ

Pinterest LinkedIn Tumblr

onion-price-riseಚಿತ್ರದುರ್ಗ: ‘ಈರುಳ್ಳಿ ಬೆಳೆ ಬೆಲೆ ಕುಸಿದಿರುವ ಪರಿಣಾಮ, ಜಿಲ್ಲೆಯಲ್ಲಿ ನಾಲ್ವರು ರೈತರು ಸಾಲಬಾಧೆ ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ತಕ್ಷಣ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಮುಖಂಡರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ಸಲ್ಲಿಸಿದರು.

‘ಈರುಳ್ಳಿ ಬೆಳೆಗೆ ಬೆಲೆ ಸಿಗದೇ, ಸಾಲ ಬಾಧೆಯಿಂದ ಬೇಸತ್ತ ಚಳ್ಳಕೆರೆಯ 3 ಹಾಗೂ ಹಿರಿಯೂರು ತಾಲ್ಲೂಕಿನ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಲೆ ಸಿಗದ ಪರಿಣಾಮ, ಪ್ರತಿಯೊಬ್ಬ ರೈತರ ಮನೆಯ ಅಂಗಳದಲ್ಲಿ ಈರುಳ್ಳಿಯ ಮೂಟೆಗಳನ್ನು ರಾಶಿ ಹಾಕಿಕೊಂಡು ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರದ ಯಾವ ಸಚಿವರು ಬೆಳೆಗಾರರ ಬೆಂಬಲಕ್ಕೆ ಬರಲಿಲ್ಲ’ ಎಂದು ಆಕ್ಷೇಪಿಸಿದರು.

‘ಒಂದು ಕಡೆ ಶೇಂಗಾ ಸಂಪೂರ್ಣ ನಾಶವಾಗಿದೆ. ಮತ್ತೊಂದು ಕಡೆ ಮೆಕ್ಕೆಜೋಳವೂ ಕೈಕೊಟ್ಟಿದೆ. ಈ ಕಡೆ ಈರುಳ್ಳಿ ಬೆಳೆದಿರುವವರೂ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಆದರೆ, ಜನಪ್ರತಿನಿಧಿಗಳಾದ ನೀವು ಕಾವೇರಿ, ಮಂಡ್ಯ, ಮೈಸೂರು ಗಲಾಟೆಯಲ್ಲೇ ಮುಳುಗಿದ್ದೀರಿ. ಮೊದಲು ಸರ್ಕಾರದಿಂದ ಈರುಳ್ಳಿಗೆ ಬೆಂಬಲ ನೀಡಿ ಖರೀದಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ರೈತ ಮುಖಂಡರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ‘ಈರುಳ್ಳಿ ಬೆಳೆಗಾರರ ಸಮಸ್ಯೆ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ನೀವು, ಒಂದು ನಿಯೋಗದೊಂದಿಗೆ ಗುರುವಾರ ಬೆಂಗಳೂರಿನಲ್ಲಿ ನನ್ನನ್ನು ಭೇಟಿಯಾಗಿರಿ. ಕೃಷಿ ಸಚಿವ ಕೃಷ್ಣಭೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುತ್ತೇನೆ. ಈ ವಿಶೇಷ ಪ್ಯಾಕೇಜ್ ಬಗ್ಗೆಯೂ ಅಲ್ಲಿ ಚರ್ಚೆ ಮಾಡೋಣ’ ಎಂದು ತಿಳಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಕಾರ್ಯದರ್ಶಿ ಕೆ.ಪಿ.ಭೂತಯ್ಯ, ಧನಂಜಯ ಮತ್ತಿತರರು ಹಾಜರಿದ್ದರು.

Comments are closed.