ಕರ್ನಾಟಕ

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹೈಟೆಕ್ ಆಯುರ್ವೇದ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

sidduಮೈಸೂರು,ಅ,7-ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯುಷ್ ಇಲಾಖೆ ವತಿಯಿಂದ ಕರ್ನಾಟಕ ಆರೋಗ್ಯ ಮತ್ತು ಅಭಿವೃದ್ಧಿ ಸುಧಾರಣೆ ಯೋಜನೆಯಲ್ಲಿ ಹೈಟೆಕ್ ಆಯುರ್ವೇದ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಳಗ್ಗೆ ಬೃಂದಾವನ ಬಡಾವಣೆಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಆಸ್ಪತ್ರೆ ಆವರಣದಲ್ಲಿ 9.14 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೈಟೆಕ್ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಯುಷ್ ಇಲಾಖೆ ಮೈಸೂರು ಮತ್ತು ಲೋಕೋಪಯೋಗಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹೈಟೆಕ್ ನೂರು ಹಾಸಿಗೆಯುಳ್ಳ ಪಂಚಕರ್ಮ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಈ ಆಸ್ಪತ್ರೆಯು ನೆಲ ಮಹಡಿ ಹಾಗೂ ಮೊದಲನೇ ಮಹಡಿಯನ್ನು ಹೊಂದಿದೆ.

ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹಾಗೂ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ. ಇಂತಹ ಸೌಲಭ್ಯಗಳು ರಾಜ್ಯದ ಎಲ್ಲಾ ಜನರಿಗೂ ದೊರಕಬೇಕೆಂಬ ಸದುದ್ದೇಶದಿಂದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ವಿವಿಧ ರೋಗಗಳಿಗೆ ಇಂಗ್ಲೀಷ್ ಮೆಡಿಷನ್ ಗೆ ಮಾರು ಹೋಗದೆ ಆಯುರ್ವೇದ ಚಿಕಿತ್ಸೆಯತ್ತ ಹೋಗುತ್ತಿದ್ದಾರೆ. ಪ್ರಕೃತಿಯಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿ ಮತ್ತು ಮಾತ್ರೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳಿಗೆ ಆಯುರ್ವೇದ ರಾಮಬಾಣ ಎಂಬ ಮಾತು ಕೇಳಿಬರುತ್ತಿದ್ದು ಸರ್ಕಾರ ಆಯುರ್ವೇದ ಆಸ್ಪತ್ರೆಗಳಿಗೂ ಹೆಚ್ಚು ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದರು.

ಉದಾಹರಣೆಗೆ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸಾಲಯ ಬಹಳ ಹೆಸರನ್ನು ಪಡೆದಿದೆ. ಇಲ್ಲಿ ವೈದ್ಯರು ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ರೋಗಗಳನ್ನು ಗುಣಪಡಿಸುತ್ತಾರೆ. ಇಂಗ್ಲೀಷ್ ಚಿಕಿತ್ಸೆಗೆ ಹೋಲಿಕೆ ಮಾಡಿದರೆ ಆಯುರ್ವೇದ ಚಿಕಿತ್ಸೆ ವೆಚ್ಚ ಬಹಳ ಕಡಿಮೆ. ಈ ರೀತಿಯ ಚಿಕಿತ್ಸೆಗಳು ಎಲ್ಲಾ ಕಡೆ ದೊರೆಯುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಶಾಸಕ ವಾಸು, ಎಂ ಕೆ ಸೋಮಶೇಖರ್, ದೃವನಾರಾಯಣ್, ಮೇಯರ್ ಭೈರಪ್ಪ ಮತ್ತಿತರರು ಹಾಜರಿದ್ದರು.

Comments are closed.