ಕರ್ನಾಟಕ

ಇಂದು ತುಮಕೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ: ಈಶ್ವರಪ್ಪ ಗೈರು

Pinterest LinkedIn Tumblr

Eshwarappa-650ಶಿವಮೊಗ್ಗ, ಅ. ೭ – ಬಿಜೆಪಿ ರಾಷ್ಟ್ರೀಯ ಮುಖಂಡರ ಒತ್ತಡಕ್ಕೆ ಕ‌ಡೆಗೂ ಮಣಿದಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನಾಳೆ ತುಮಕೂರಿನಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ಇದರಿಂದಾಗಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಮಂಕಾಗಲಿವೆ.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ಸಮಾವೇಶಗಳಿಂದ ದೂರ ಇರುವಂತೆ ರಾಷ್ಟ್ರೀಯ ನಾಯಕರು ನೀಡಿರುವ ಸೂಚನೆಗೆ ಬದ್ಧವಾಗಿರುವುದಾಗಿ ತಿಳಿಸಿದರು.
ಇದೇ ಕಾರಣಕ್ಕಾಗಿ ತುಮಕೂರಿನ ಸಮಾವೇಶದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ನಿನ್ನೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್, ಬ್ರಿಗೇಡ್ ಸಮಾವೇಶಗಳಿಂದ ದೂರ ಉಳಿಯಬೇಕು. ಇಂತಹ ಸಮಾವೇಶಗಳಲ್ಲಿ ಪಾಲ್ಗೊಳ್ಳುವುದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದ್ದರು. ಅವರ ಸಲಹೆ ಮೇರೆಗೆ ಇಂತಹ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ತಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳಿರುವುದು ನಿಜವಾದರೂ ಇವುಗಳಿಗೆ ಆದಷ್ಟು ಬೇಗ ಮುಕ್ತಿ ದೊರೆಯಲಿದೆ ಎಂಬ ವಿಶ್ವಾಸ ತಮ್ಮದಾಗಿದೆ. ಯಡಿಯೂರಪ್ಪನವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಪಕ್ಷದ ಧ್ಯೇಯೋದ್ದೇಶಗಳಿಗೆ ಧಕ್ಕೆ ಉಂಟು ಮಾಡುವ ಪ್ರಶ್ನೆಯೇ ಇಲ್ಲ ಎಂದ ಅವರು, ರಾಯಣ್ಣ ಬ್ರಿಗೇಡ್ ಸಂಘಟನೆ ವಿಷಯದಲ್ಲಿ ತಮ್ಮ ನಿಲುವು ಬದಲಾಗುವುದಿಲ್ಲ. ರಾಯಣ್ಣ ಬ್ರಿಗೇಡ್ ಇರುವುದೇ ಬಿಜೆಪಿಗಾಗಿ. ಇದರ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಯಡಿಯೂರಪ್ಪ ಪಕ್ಷದ ನಾಯಕತ್ವ ವಹಿಸಿಕೊಂಡ ಮೇಲೆ ಮುಖಾಮುಖಿ ಚರ್ಚಿಸಿಲ್ಲ. ಈಗ ರಾಷ್ಟ್ರೀಯ ಮುಖಂಡರ ಸಲಹೆಯಂತೆ 8-10 ದಿನಗಳಲ್ಲಿ ಒಟ್ಟಾಗಿ ಕುಳಿತು ಚರ್ಚಿಸುತ್ತೇವೆ ಎಂದರು.
ರಾಯಣ್ಣ ಬ್ರಿಗೇಡ್ ವಿಚಾರವಲ್ಲದೆ, ಪಕ್ಷದ ಪದಾಧಿಕಾರಿಗಳ ನೇಮಕ, ಕೋರ್ ಕಮಿಟಿ ಮತ್ತಿತರ ವಿಚಾರಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ರಾಯಣ್ಣ ಬ್ರಿಗೇಡ್‌ನ ಚಟುವಟಿಕೆಗಳು ಮುಂದುವರೆಯಲಿವೆ. ನಾಳಿನ ತುಮಕೂರು ಸಮಾವೇಶವನ್ನು ಮುಂದೂಡಲು ಬ್ರಿಗೇಡ್‌ನ ಕೆಲವು ಹಿರಿಯ ಮುಖಂಡರು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.

Comments are closed.