ಕರ್ನಾಟಕ

ತಮಿಳುನಾಡಿಗೆ 6 ದಿನಗಳ ಕಾಲ ನೀರು ಬಿಡುವುದಾಗಿ ಸುಪ್ರೀಂಗೆ ಹೇಳಿಕೆ ಇತ್ತ ಕರ್ನಾಟಕ

Pinterest LinkedIn Tumblr

kaveriನವದೆಹಲಿ: ಸೆಪ್ಟೆಂಬರ್ 30ರಂದು ನೀಡಿದ ಆದೇಶದಂತೆ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ 6 ದಿನಗಳ ಕಾಲ ನೀರು ಹರಿಸುವುದಾಗಿ ಮಂಗಳವಾರ ಕರ್ನಾಟಕ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸೆಪ್ಟೆಂಬರ್ 30ರ ಆದೇಶ ಕುರಿತಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದ್ದು, ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ ಅವರು ಸುಪ್ರೀಂ ಆದೇಶ ಪಾಲಿಸುತ್ತಿರುವುದಾಗಿ ಹೇಳಿದರು. ‘
ತಮಿಳುನಾಡಿಗೆ 6 ದಿನಗಳ ಕಾಲ ನೀರು ಹರಿಸುತ್ತೇವೆ’, 6 ದಿನಗಳಲ್ಲಿ ಒಟ್ಟು 36,000 ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ನಾರಿಮನ್ ಕೋರ್ಟ್ ಗೆ ಮಾಹಿತಿ ನೀಡಿದರು.
ತಮಿಳುನಾಡಿಗೆ ನೀರು ಬಿಡುವ ಸಂಬಂಧ ರಾಜ್ಯ ಸರ್ಕಾರ ನಿನ್ನೆ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಾವೇರಿ ನೀರನ್ನು ರೈತರ ಬೆಳೆಗೂ ಹರಿಸಲು ನಿರ್ಣಯ ಕೈಗೊಂಡಿದ್ದು, ಈಗಾಗಲೇ ಕಳೆದ ರಾತ್ರಿಯಿಂದಲೇ 9,000 ಕ್ಯೂಸೆಕ್ಸ್ ನೀರು ಹರಿದಿದೆ. ಇಂದು ಮತ್ತು ನಾಳೆ ಹೆಚ್ಚು ಹೆಚ್ಚು ನೀರು ಹರಿಸುವ ಮೂಲಕ ನಿಮ್ಮ ಆದೇಶದಂತೆ ಬಾಕಿ ಕೊರತೆಯನ್ನು ನೀಗಿಸುತ್ತೇವೆ. ಅಕ್ಟೋಬರ್ 06ರೊಳಗೆ ಸುಪ್ರೀಂ ಆದೇಶ ಪೂರ್ತಿಯಾಗಿ ಪಾಲಿಸಲಾಗುತ್ತದೆ ಎಂದು ನಾರಿಮನ್ ತಿಳಿಸಿದರು.
ಇದೇ ವೇಳೆ ನಾವು ನಮ್ಮ ಲೆಕ್ಕಾಚಾರದಂತೆ ಆದೇಶ ನೀಡಿದ್ದೇವೆ ಎಂಬ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಾರಿಮನ್ ಅವರು, ನೀರು ಬಿಡುಗಡೆ ಆದೇಶಕ್ಕೆ ಲೆಕ್ಕಾಚಾರವೇ ಮುಖ್ಯವಲ್ಲ. ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಆದೇಶ ನೀಡಬೇಕಿತ್ತು ಎಂದರು.
ಮಂಡಳಿ ರಚನೆಗೆ ಕೇಂದ್ರ ಆಕ್ಷೇಪ
ನಾಲ್ಕು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಕೂಡಾ ಒಪ್ಪಿಗೆ ಸೂಚಿಸಿದ್ದರು. ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ಮಾಡುವಂತಿಲ್ಲ. ಶಾಸಕಾಂಗದ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಕಾರಣ ನೀಡಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಈಗ ವಿರೋಧ ವ್ಯಕ್ತಪಡಿಸಿದ್ದಾರೆ.

Comments are closed.