ಕರ್ನಾಟಕ

ಬೆಂಗಳೂರಿನಲ್ಲಿ 4000 ಕೋಟಿ ಕಪ್ಪು ಹಣ

Pinterest LinkedIn Tumblr

note

ಬೆಂಗಳೂರು, ಸೆ.29-ಕಪ್ಪು ಹಣ ಸಕ್ರಮಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯ ಅವಧಿ ನಾಳೆ ಕೊನೆಗೊಳ್ಳಲಿದ್ದು, ದೇಶಾದ್ಯಂತ ಇದುವರೆಗೆ 35,000 ಕೋಟಿ ರೂ.ಅಧಿಕ ಹಣ ಘೋಷಿಸಲಾಗಿದ್ದು, ಇದರಲ್ಲಿ 4000 ಕೋಟಿ ರೂ. ಕಪ್ಪು ಹಣ ಬೆಂಗಳೂರು ಒಂದರಲ್ಲೇ ಇರುವುದು ಪತ್ತೆಯಾಗಿದೆ.
ಕೇಂದ್ರ ಸರ್ಕಾರ ಕಪ್ಪು ಹಣ ಬಿಳಿ ಮಾಡಲು ಜಾರಿ ಮಾಡಿದ ಆದಾಯ ಘೋಷಣೆ ಯೋಜನೆ (ಐಡಿಎಸ್)ಯಿಂದ ಕರ್ನಾಟಕ ವಲಯ ಒಂದರಲ್ಲೇ 4000 ಕೋಟಿ ರೂ. ಹರಿದುಬಂದಿದೆ. ದೇಶದ ಒಟ್ಟು ಕಪ್ಪು ಹಣದಲ್ಲಿ ಶೇಕಡಾ 10ರಷ್ಟು ಕರ್ನಾಟಕದಲ್ಲೇ ಇರುವುದು ಇದರಿಂದ ತಿಳಿದು ಬಂದಿದೆ ಎಂದು ನೇರ ತೆರಿಗೆಯ ಕೇಂದ್ರ ಮಂಡಳಿಯ ಮೂಲಗಳು ತಿಳಿಸಿವೆ.
ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಐಡಿಎಸ್ ಯೋಜನೆ ಜಾರಿಗೊಳಿಸಿತ್ತು. ಕೇವಲ 45 ಶೇಕಡಾ ತೆರಿಗೆಯನ್ನು ಪಾವತಿಸಿ ತಮ್ಮ ಅಕ್ರಮ ಹಣ ಮತ್ತು ಸಂಪತ್ತನ್ನು ಸಕ್ರಮಗೊಳಿಸುವಂತೆ ಕೇಂದ್ರ ಸೂಚಿಸಿತ್ತು. ಅದಕ್ಕೆ ದೇಶಾದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಮ್ಮೆ ಈ ತೆರಿಗೆ ಪಾವತಿಸಿದರೆ ವಿಚಾರಣೆ ಮತ್ತು ತನಿಖೆಯಿಂದ ಮುಕ್ತಿ ದೊರೆಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಕಳೆದ ಒಂದು ತಿಂಗಳಲ್ಲಿ ತೆರಿಗೆ ಪಾವತಿದಾರರು ಹೆಚ್ಚಿನ ಆಸಕ್ತಿ ತೋರಿಸಿರುವುದು ಬೆಳಕಿಗೆ ಬಂದಿದೆ. 1988ರ ಬೇನಾಮಿ ಹಣ ವರ್ಗಾವಣೆ (ನಿಷೇಧ) ಕಾಯ್ದೆಯನ್ವಯ ಕಪ್ಪು ಹಣ ಹೊಂದುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಘೋಷಿತ ಆಸ್ತಿ ಮತ್ತು ಬೇನಾಮಿ ಆಸ್ತಿಗಳಿಗೆ ಒಮ್ಮೆಲೆ ಶೇಕಡಾ 45ರಷ್ಟು ತೆರಿಗೆ ಮತ್ತು ಅಧಿಭಾರ (ಸರ್‍ಚಾರ್ಜ್) ಪಾವತಿಸಬೇಕು ಎಂಬುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ನಾಳೆ ಮಧ್ಯರಾತ್ರಿಯವರೆಗೂ ತೆರಿಗೆ ಪಾವತಿ ಕೌಂಟರ್‍ಗಳನ್ನು ತೆರೆಯಲಾಗುತ್ತದೆ. ಕೊನೆಯ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆದಾರರು ಬರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಮತ್ತು ಗೋವಾ ವಲಯದ ತೆರಿಗೆ ಆಯುಕ್ತೆ ನೂತನ್ ಒಡೆಯರ್ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ದಮಿಗಳು, ಜಂಟಿ ಪಾಲುದಾರರು, ಕನ್ನಡ ಚಲನಚಿತ್ರ ನಟರು, ರಾಜಕಾರಣಿಗಳು, ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಅಕ್ರಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಪತ್ರ ಬರೆದು ತಮ್ಮ ಆಸ್ತಿಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗಿತ್ತು ಎಂದು ತಿಳಿದುಬಂದಿದೆ.

Comments are closed.