ಕರ್ನಾಟಕ

ಕಾವೇರಿಗಾಗಿ ನಡೆದ ಮಧ್ಯಸ್ಥಿಕೆ ಸಭೆಯಲ್ಲಿ ಪಟ್ಟು ಬಿಡದ ತಮಿಳುನಾಡು : ನಿರ್ಣಯಕ್ಕೆ ಬರಲು ಸಭೆ ವಿಫಲ

Pinterest LinkedIn Tumblr

uma

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದೆ.

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರಾಜ್ಯದ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಹಾಗೂ ತಮಿಳುನಾಡು ಪರವಾಗಿ ಲೋಕೋಪಯೋಗಿ ಸಚಿವ ಈಡಪ್ಪಾಡಿ ಪಳನಿಸ್ವಾಮಿ, ಮುಖ್ಯ ಕಾರ್ಯದರ್ಶಿ ರಾಮಮೋಹನ ರಾವ್ ಪಾಲ್ಗೊಂಡಿದ್ದರು.

ಉಮಾ ಭಾರತಿ ಅವರು ಎರಡು ರಾಜ್ಯಗಳ ಪರ ವಾದವನ್ನು ಆಲಿಸಿದ ಬಳಿಕ ಉಭಯ ರಾಜ್ಯಗಳು ನೀರಿನ ವಿಷಯದಲ್ಲಿ ರಾಜಕೀಯ ಮಾಡದೇ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾತುಕತೆ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಉಮಾ ಭಾರತಿ, ಸಭೆಯ ಸಾರಾಂಶವನ್ನು ಅಡ್ವೋಕೇಟ್‌ ಜನರಲ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೆಟ್ಟೂರು ಮತ್ತು ಕಾವೇರಿ ಕೊಳ್ಳದಲ್ಲಿ ನೀರಿನ ಲಭ್ಯತೆಯ ಬಗ್ಗೆ ತಜ್ಞರ ಸಮಿತಿಯನ್ನು ನೇಮಕ ಮಾಡಿ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ತಮಿಳುನಾಡು ಒಪ್ಪಿಗೆ ಸೂಚಿಸಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ನೀರಿನ ವಿಚಾರವಾಗಿ ಉಭಯ ರಾಜ್ಯಗಳ ಮಧ್ಯೆ ಮುಂದೆ ಗಲಾಟೆ ನಡೆದರೆ ಎರಡು ರಾಜ್ಯಗಳ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಉಮಾ ಭಾರತಿ ತಿಳಿಸಿದರು.

Comments are closed.