ಮೈಸೂರು: ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗೆ ಲಂಚ ಪಡೆಯಲು ಪ್ರೇರೇಪಿಸಿದ ಪ್ರಕರಣದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಸುನೀಲ್ ಬೋಸ್‍ಗೆ ನಿನ್ನೆ ಮೈಸೂರಿನ 3ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ನ್ಯಾಯಾಲಯಕ್ಕೆ ಶರಣಾಗಿ ಸಚಿವರ ಪುತ್ರ ಸುನೀಲ್ ಬೋಸ್ ಜಾಮೀನು ಪಡೆದುಕೊಂಡಿದ್ದಾರೆ.
2010ರಲ್ಲಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಲ್ಪೋಸಿಸ್‍ಗೆ ಲಂಚ ಪಡೆಯಲು ಸಚಿವರ ಪುತ್ರ ಸುನೀಲ್ ಬೋಸ್ ಪ್ರೇರೆಪಿಸಿದ್ದರು ಎನ್ನುವ ಆರೋಪ ಇದ್ದು 2013ರಲ್ಲಿ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸ್ ಸುನೀಲ್ ಬೋಸ್ ಮತ್ತು ರಾಜು ಹೆಸರನ್ನ ಕೈ ಬಿಟ್ಟಿದ್ದರು. ಆದರೆ ಇಬ್ಬರನ್ನು ಆರೋಪಿಗಳಾಗಿ ಪರಿಗಣಿಸಬೇಕೆಂದು ದೂರುದಾರ ಬಸವರಾಜು ನ್ಯಾಯಲಯದ ಮೊರೆ ಹೋಗಿದ್ದರು.
ಸೆಪ್ಟೆಂಬರ್ 7 ರಂದು ಬಸವರಾಜು ಅರ್ಜಿ ಪುರಸ್ಕರಿಸಿದ ಮೈಸೂರಿನ 3 ಜೆಎಂಎಫ್ ನ್ಯಾಯಾಲಯ, ಪ್ರಕರಣದಲ್ಲಿ ಸುನೀಲ್ ಬೋಸ್ ಎರಡನೆ ಆರೋಪಿಯಾಗಿ, ಮೂರನೆ ಆರೋಪಿಯಾಗಿ ಬೋಸ್ ಗೆಳೆಯ ರಾಜು ಅವರನ್ನ ಪರಿಗಣನೆ ಮಾಡಿತ್ತು. ಜೊತೆಗೆ ಇಬ್ಬರು ಆರೋಪಿಗಳನ್ನ ಸೆಪ್ಟೆಂಬರ್ 27 ಕ್ಕೆ ನ್ಯಾಯಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಸುನೀಲ್ ಬೋಸ್ ನ್ಯಾಯಾಲಯಕ್ಕೆ ಶರಣಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ಹಾಗೂ ರಾಜುಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
ಹೀಗಾಗಿ ಬಂಧನದ ಭೀತಿಯಿಂದ ನ್ಯಾಯಾಲಯಕ್ಕೆ ಸುನೀಲ್ ಬೋಸ್ ಶರಣಾಗಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಸ್ಥಳೀಯರ ಶ್ಯೂರಿಟಿ 1 ಲಕ್ಷ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದೆ.