ಕರ್ನಾಟಕ

ಬಿಬಿಎಂಪಿ ಮತ್ತೆ ‘ಕೈ’ ಗೆ : ನೂತನ ಮೇಯರ್ ಆಗಿ ಜಿ.ಪದ್ಮಾವತಿ ಆಯ್ಕೆ

Pinterest LinkedIn Tumblr

padmavathi

ಬೆಂಗಳೂರು: ಬಹು ನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಜಿ.ಪದ್ಮಾವತಿ ಅವರು ಬುಧವಾರ ಆಯ್ಕೆಯಾಗಿದ್ದಾರೆ.

ಬಿಬಿಎಂಪಿ ಕಚೇರಿಯ ಕೆಂಪೇಗೌಡ ಸಭಾಂಗಣದಲ್ಲಿ ಇಂದು ನಡೆದ ಮೇಯರ್ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಮುಂದುವರೆದಿದ್ದು, ಜೆಡಿಎಸ್ ಕಾರ್ಪೋರೇಟರ್ ಗಳ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಜಿ ಪದ್ಮಾವತಿ ಅವರು ಆಯ್ಕೆಯಾಗಿದ್ದಾರೆ.

ಮೇಯರ್ ಆಯ್ಕೆ ಪ್ರಕ್ರಿಯೆ ವೇಳೆ ಜಿಲ್ಲಾಧಿಕಾರಿ ವಿ.ಶಂಕರ್ ಹಾಗೂ ಹಾಲಿ ಮೇಯರ್ ಮಂಜುನಾಥ್ ರೆಡ್ಡಿ ಉಪಸ್ಥಿತರಿದ್ದರು. ಪ್ರಾದೇಶಿಕ ಆಯುಕ್ತೆ ಎಂ ವಿ ಜಯಂತಿ ಅವರು ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಿದರೆ.

ಎಲ್ಲ ಕಾರ್ಪೋರೇಟರ್ ಗಳು ಕೈ ಎತ್ತುವ ಮೂಲಕ ಪರ ಮತ್ತು ವಿರೋಧ ಮತಗಳನ್ನು ಚಲಾಯಿಸಿದರು. ಮತದಾನದ ಬಳಿಕ ಎಲ್ಲ ಕಾರ್ಪೋರೇಟರ್ ಗಳು ನಡಾವಳಿ ಪುಸ್ತಿಕೆಗೆ ಸಹಿ ಹಾಕಿದರು. ಮತದಾನದಲ್ಲಿ 28 ಶಾಸಕರು, 28 ಎಂಎಲ್ ಸಿಗಳು, 11 ರಾಜ್ಯಸಭಾ ಸದಸ್ಯರು, 5 ಲೋಕಸಭಾ ಸದಸ್ಯರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ಅವರ ಪರ ಒಟ್ಟು 142 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಬಿಜೆಪಿಯ ಡಿಹೆಚ್ ಲಕ್ಷ್ಮಿ ಅವರು 120 ಮತಗಳನ್ನು ಗಳಿಸಿ ಪರಾಭವಗೊಂಡರು.

ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ನಡೆಯಿತು. ತೀವ್ರ ಕುತೂಹಲ ಕೆರಳಿಸಿದ್ದ ಈ ಆಯ್ಕೆ ಪ್ರಕ್ರಿಯೆಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್‌ನಗರ ವಾರ್ಡ್‌ನ ಕಾರ್ಪೋರೇಟರ್ ಜಿ ಪದ್ಮಾವತಿ ಹಾಗೂ ಶಾಂತಿನಗರ ವಾರ್ಡ್‌ನ ಪಿ ಸೌಮ್ಯ ಶಿವಕುಮಾರ್‌ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಜೆಡಿಎಸ್ ಸದಸ್ಯರು ಕೂಡ ಸೌಮ್ಯ ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಕಾಂಗ್ರೆಸ್ ನಾಯಕರು ಜಿ ಪದ್ಮಾವತಿ ಅವರನ್ನೇ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ಮೇಯರ್ ಹುದ್ದೆ ಆಕಾಂಕ್ಷಿಯಾಗಿದ್ದ ಶಾಂತಿನಗರ ವಾರ್ಡ್‌ನ ಪಿ ಸೌಮ್ಯ ಶಿವಕುಮಾರ್‌ ಅವರು ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳುವ ಮೂಲಕ ಮೇಯರ್ ಕಣದಿಂದ ಹಿಂದೆ ಸರಿದಿರುವುದಾಗಿ ಪರೋಕ್ಷವಾಗಿ ಹೇಳಿದರು.

Comments are closed.