
ಬೆಂಗಳೂರು/ನವದೆಹಲಿ, ಸೆ. ೨೬ – ಕಾವೇರಿ ನದಿ ನೀರಿನ ಬಿಡುಗಡೆ ನಿರ್ದೇಶನಕ್ಕೆ ಸಂಬಂಧಿಸಿದಂತೆ ಅಸಹಾಯಕತೆ ಸೂಚಿಸಿ ಕರ್ನಾಟಕ ವಿಧಾನಮಂಡಲ ಕೈಗೊಂಡಿರುವ ಸರ್ವಾನುಮತದ ನಿರ್ಣಯದ ಬಗ್ಗೆ ಸುಪ್ರೀಂ ಕೋರ್ಟ್ ನಾಳಿನ ವಿಚಾರಣೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಗರಿಗೆದರಿದೆ.
ತಮಿಳುನಾಡಿಗೆ ನೀರು ಬಿಡುಗಡೆ ಮಾಡದೇ ಇರುವ ಕ್ರಮವನ್ನು ಪರಿಗಣಿಸಿ ಕರ್ನಾಟಕದ ವಿರುದ್ಧ ನ್ಯಾಯ ನಿಂದನೆ ಕ್ರಮ ಜರುಸಲು ಸುಪ್ರೀಂ ಕೋರ್ಟ್ ಮುಂದಾಗುವುದೋ ಅಥವಾ ನೀರು ಬಿಡುಗಡೆಗೆ ಮತ್ತೊಮ್ಮೆ ನಿರ್ದೇಶನ ಮಾಡುವುದೋ ಇಲ್ಲವೇ ಬೇರೆ ಯಾವ ಕ್ರಮ ಕೈಗೊಳ್ಳುವುದೋ ಎಂಬ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಪುಂಖಾನುಪುಂಕ ಚರ್ಚೆ ಭುಗಿಲೆದ್ದಿದೆ.
ತಮಿಳುನಾಡು ಈ ಅವಕಾಶ ಬಳಸಿಕೊಂಡು ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲು ಮಾಡುವ ನಿರೀಕ್ಷೆಯಲ್ಲಿ ಪ್ರಕರಣದ ಗಾಂಭೀರ್ಯವನ್ನು ಮನಗಂಡಿರುವ ಕರ್ನಾಟಕ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ಶಾಸನಸಭೆ ನಿರ್ಣಯದ ವಿವರ ಹಾಗೂ ಇನ್ನಿತರ ಪೂರಕ ಮಾಹಿತಿಯನ್ನು ಒದಗಿಸಿದೆ. ಏನೇ ಆದರೂ ಕರ್ನಾಟಕದ ಎದೆ ಬಡಿತ ಜೋರು ಮಾಡುವ ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಏನಾಗುವುದು ಎಂಬುದನ್ನು ಕಾದು ನೋಡಬೇಕು.
ಈ ಮಧ್ಯೆ, ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ರಾಜ್ಯದ ಉದ್ದಗಲ ಬಹುಮುಖ್ಯವಾಗಿ ಕಾವೇರಿ ನದಿಪಾತ್ರದ ಮಂಡ್ಯ, ಮೈಸೂರು, ಬೆಂಗಳೂರು ಮಹಾನಗರಗಳಲ್ಲಿ ಕಟ್ಟೆಚ್ಚರ ಕಣ್ಗಾವಲು ಹಾಕಲಾಗಿದೆ.
ರಾಜ್ಯದ ಮಾರ್ಪಾಟು ಅರ್ಜಿ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಸೆ.27ರವರೆಗೆ ತಮಿಳುನಾಡಿಗೆ ಆರು ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ನೀಡಿರುವ ಆದೇಶ ಮಾರ್ಪಡಿಸಬೇಕೆಂದು ಕೋರಿ ಕರ್ನಾಟಕ ಸರ್ಕಾರ ಇಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.
ಡಿಸೆಂಬರ್ ಅಂತ್ಯದವರೆಗೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಇಂದು ಸಲ್ಲಿಸಿದ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ. ತಮಿಳುನಾಡಿಗೆ 7 ದಿನಗಳ ಕಾಲ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ಸ್ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸೆ. 20ರಂದು ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.
ಫಾಲಿ ನಾರಿಮನ್ ನೇತೃತ್ವದ ವಕೀಲರ ತಂಡ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ, ಕರ್ನಾಟಕದ ಪ್ರಸ್ತುತ ಜಲಾಶಯಗಳ ಪರಿಸ್ಥಿತಿಯನ್ನು ವಿವರಿಸಿದೆ.
ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ಸ್ ನಂತೆ 7 ದಿನಗಳಿಗೆ 42 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂಬ ನ್ಯಾಯಾಲಯದ ಆದೇಶ ಪಾಲಿಸುವುದು ಕಷ್ಟಸಾಧ್ಯ. ನಮ್ಮ ಜಲಾಶಯಗಳಲ್ಲಿರುವ ನೀರನ್ನು ಜನರಿಗೆ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿರುವ ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಸಿಕೊಳ್ಳಲು ಇತ್ತೀಚೆಗೆ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ.
ಮಳೆಯ ಅಭಾವದಿಂದ ಜಲಾಶಯಗಳಿಗೆ ನೀರು ಹರಿದು ಬರುತ್ತಿಲ್ಲ, ಜಲಾಶಯಗಳಲ್ಲಿ ಈಗಿರುವ ನೀರು ಕುಡಿಯಲಿಕ್ಕೆ ಮಾತ್ರ ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ವರೆಗೂ ನೆರೆ ರಾಜ್ಯಕ್ಕೆ ನೀರು ಹರಿಸುವುದು ಕಷ್ಟಸಾಧ್ಯ ಎಂದು ಸರ್ಕಾರ ಹೇಳಿದೆ.
ಮಾರ್ಪಾಡು ಅರ್ಜಿ ಸಲ್ಲಿಸುವ ಸಂಬಂಧ ಸುಪ್ರೀಂಕೋರ್ಟ್ ಮುಂದೆ ರಾಜ್ಯದ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಎಫ್.ಎಸ್. ನಾರಿಮನ್ ಅವರೊಂದಿಗೆ ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕಾನೂನು ಸಚಿವ ಟಿ.ಬಿ. ಜಯಚಂದ್ರ ಚರ್ಚೆ ನಡೆಸಿದ್ದಾರೆ.
ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಸಚಿವದ್ವಯರು ಮಾರ್ಪಾಡು ಅರ್ಜಿ ಸಲ್ಲಿಸುವುದರಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆಯೂ ನಾರಿಮನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸರ್ವಾನುಮತದ ನಿರ್ಣಯ
ನಮ್ಮ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗೆ ಹೊರತುಪಡಿಸಿ ಮತ್ಯಾವ ಉದ್ದೇಶಕ್ಕೂ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಕಳೆದ ಶುಕ್ರವಾರ ನಡೆದ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
ಈ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ ಎಂಬ ಸಂದೇಶವನ್ನು ಪರೋಕ್ಷವಾಗಿ ತಮಿಳುನಾಡಿಗೆ ರವಾನಿಸಲಾಗಿತ್ತು. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಅರ್ಜಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಿಲ್ಲ. ಈ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳುನಾಡು ಆರೋಪಿಸಿದೆ.
Comments are closed.