
ಬೆಂಗಳೂರು, ಸೆ. ೨೬- ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಇಂದಿನಿಂದ ಸಮರ ಮುಂದುವರಿಸಿರುವ ಬಿಬಿಎಂಪಿ ಇಂದು ವೃಷಭಾವತಿ ರಾಜಕಾಲುವೆ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕೈಗಾರಿಕಾ ಶೆಡ್‌ಗಳನ್ನು ನೆಲಸಮಗೊಳಿಸಿದೆ.
ತುಮನಹಳ್ಳಿ ಮೇಲ್ಸೇತುವೆ ಸಮೀಪದಲ್ಲಿ ಹರಿದು ಹೋಗುವ ಋಷಬಾವತಿ ಕಣಿವೆ 66 ಅಡಿಗಳ ಪೈಕಿ 40 ಅಡಿಗಳಷ್ಟು ಕಾಲುವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿ ಕೈಗಾರಿಕಾ ಶೆಡ್‌ಗಳಿಗೆ ಬಾಡಿಗೆ ನೀಡಿದ್ದರು. ಸುಮಾರು 1 ಕಿಲೋಮೀಟರ್ ಉದ್ದದ ರಾಜಕಾಲುವೆಯಲ್ಲಿ 8 ಮನೆಗಳು ಸೇರಿದಂತೆ 22 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್‌ನಡಿ ಎರಡು ಜೇಸಿಬಿ ಯಂತ್ರಗಳ ಸಹಾಯದಿಂದ ನೆಲಸಮ ಕಾರ್ಯಾಚರಣೆ ಆರಂಭಿಸಿದ ಬಿಬಿಎಂಪಿ ಸಿಬ್ಬಂದಿಗಳು ಸಲಾರ್‌ಪುರಿ ಸತ್ರ, ಎಲ್‌ಆರ್ ಮೆಟಲ್ ಲಿಮಿಟೆಡ್ ಕೈಗಾರಿಕೆಗಳು ಸೇರಿದಂತೆ ಒತ್ತುವರಿ ಮಾಡಿಕೊಂಡಿದ್ದ ಸ್ಥಳಗಳನ್ನು ತೆರವುಗೊಳಿಸಲಾಯಿತು.
ಬಿಬಿಎಂಪಿ ಬೃಹತ್ ನೀರ್‌ಗಾಲುವೆ ಪ್ರಧಾನ ಎಂಜಿನಿಯರ್ ಸಿದ್ದೇಗೌಡ ಹಾಗೂ ಜಂಟಿ ಆಯುಕ್ತ ಡಾ. ಯತೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು,
ಕಾವೇರಿಪುರದ ಸರ್ವೇ ನಂ.6, 7, 8 ಮತ್ತು 9ರಲ್ಲಿ 20 ಆಸ್ತಿಗಳು ಒತ್ತುವರಿಯಾಗಿದ್ದು, ಈಗಾಗಲೇ ಸರ್ವೇ ಅಧಿಕಾರಿಗಳು ಗುರುತು ಮಾಡಿದ ಆಧಾರದ ಮೇಲೆ ಕಟ್ಟಡಗಳನ್ನು ಕೆಡವಿ ಹಾಕಲಾಯಿತು.
ಈ ಮಧ್ಯೆ ಬಿಬಿಎಂಪಿ ಕಾರ್ಯಾಚರಣೆಯಿಂದ ತೀವ್ರ ಆತಂಕಕ್ಕೆ ಒಳಗಾದ ಕಟ್ಟಡ ಮಾಲೀಕರು ಸ್ಥಳಕ್ಕೆ ಆಗಮಿಸಿ ಒತ್ತುವರಿ ಮಾಡಿಕೊಂಡಿಲ್ಲ. ಕ್ರಮ ಬದ್ಧವಾಗಿಯೇ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳ ಬಳಿ ಅಳಲನ್ನು ತೋಡಿಕೊಂಡರು.
66 ಅಡಿಗಳಷ್ಟು ಇರುವ ರಾಜಕಾಲುವೆಯಲ್ಲಿ 40 ಅಡಿಗಳಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ. ದಾಖಲೆಗಳ ಪ್ರಕಾರವೇ ಗುರುತು ಮಾಡಲಾಗಿದೆ. ಆಗಾಗಿ ಅಷ್ಟು ಮಾತ್ರವೇ ಕಟ್ಟಡ ಒಡೆಯಲಾಗುತ್ತಿವೆ ಎಂದು ಎಂಜಿನಿಯರ್‌ಗಳು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.
ಈ ಭಾಗದಲ್ಲಿ ಬಹುತೇಕ ಆಸ್ತಿ ಮಾಲೀಕರು, ಲ್ಯಾಂಡ್ ಡೆವಲಪರ್ಸ್ ಅವರಿಂದ ಆಸ್ತಿಗಳನ್ನು ಖರೀದಿಸಿದ್ದಾರೆ. ಅಲ್ಲಿ ಕೆಲ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ಕೈಗಾರಿಕಾ ಶೆಡ್‌ಗಳಿಗೆ ಬಾಡಿಗೆಯನ್ನು ನೀಡಿದ್ದರು ಅಲ್ಲದೆ ಮತ್ತೆ ಕೆಲವರು ಸ್ವತಃ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ.
Comments are closed.