
ಬೆಂಗಳೂರು, ಸೆ. ೨೩ – ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಸುವುದು ಅತ್ಯಗತ್ಯವಾಗಿರುವುದರಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿರುವ ನೀರನ್ನು ಬೇರೆ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿಂದು ಸರ್ವಾನುಮತ ಅಂಗೀಕರಿಸುವ ಮೂಲಕ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಯಿತು.
ಕಾವೇರಿ ನೀರಿಗೆ ಸದನದ ರಕ್ಷಣೆ ನೀಡುವ ಮೂಲಕ ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಇಡೀ ಸದನ ಒಮ್ಮತದ ಅಭಿಪ್ರಾಯದ ಮೂಲಕ ಸಾರಿ ಸಾರಿ ಹೇಳಿ ಜಲ ರಕ್ಷಣೆಗೆ ಬದ್ಧತೆ ತೋರಿತು.
ಇಂದು ನಡೆದ ವಿಶೇಷ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈ.ಎಸ್.ವಿ. ದತ್ತ ಅವರು ಮಂಡಿಸಿದ ನಿರ್ಣಯಕ್ಕೆ ಇಡೀ ಸದನ ಮೇಜು ಕುಟ್ಟಿ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿತು.
ಕಾವೇರಿಗೆ ಸಂಬಂಧಿಸಿದಂತೆ ನಿರ್ಣಯ ಯಾವ ರೂಪದಲ್ಲಿರಬೇಕು ಎಂಬ ಬಗ್ಗೆ ಬೆಳಿಗ್ಗೆ 10ರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಭಾಧ್ಯಕ್ಷರು ಜೆಡಿಎಸ್ನ ಪ್ರಮುಖ ನಾಯಕರು ಸಭೆ ನಡೆಸಿ ನಿರ್ಣಯದ ತಾಂತ್ರಿಕ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿರ್ಣಯಕ್ಕೆ ಸ್ಪಷ್ಟ ರೂಪ ಕೊಡುವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಯಿತು, ಇದಾದ ನಂತರ 1.10ಕ್ಕೆ ಸದನ ಸಮಾವೇಶಗೊಂಡಿತು.
ಸಂತಾಪ ಸೂಚನಾ ನಿರ್ಣಯದ ನಂತರ ಕಾವೇರಿಗೆ ಸಂಬಂಧಿಸಿದಂತೆ ನಿರ್ಣಯವನ್ನು ಸದನದಲ್ಲಿ ಮಧ್ಯಾಹ್ನ 1.40ಕ್ಕೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮೊದಲು ಮಂಡಿಸಿದರು.
ನಂತರ ವೈ.ಎಸ್.ವಿ ದತ್ತ ಸಹ ನಿರ್ಣಯವನ್ನು ಮಂಡಿಸಿದರು. ಜಗದೀಶ್ ಶೆಟ್ಟರ್ ಅವರು ನಿರ್ಣಯದ ಆಂಗ್ಲ ಭಾಷಾ ಪ್ರತಿಯನ್ನು ಓದಿದರೆ, ಉಪ ನಾಯಕ ವೈ.ಎಸ್.ವಿ. ದತ್ತ ಕನ್ನಡದ ಪ್ರತಿಯನ್ನು ಓದಿ ನಿರ್ಣಯ ಮಂಡಿಸಿದಾಗ ಇಡೀ ಸದನದಲ್ಲಿ ಹಾಜರಿದ್ದ 200ಕ್ಕೂ ಹೆಚ್ಚು ಶಾಸಕರು ಮೇಜು ಕುಟ್ಟಿ ನಿರ್ಣಯವನ್ನು ಬೆಂಬಲಿಸಿದರು.
ವಿಧಾನಸಭೆಯಲ್ಲಿ ಮಂಡನೆಯಾದ ಕಾವೇರಿ ಸಂಬಂಧಿಸಿದ ನಿರ್ಣಯದ ಪೂರ್ಣಪಾಠ
2016-17ನೇ ಜಲವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಪರಿಸ್ಥಿತಿ ಇರುವುದನ್ನು ಈ ಸದನವು ತೀವ್ರ ಆತಂಕದಿಂದ ಗಮನಿಸಿದೆ. ಆದರೆ, ನೀರಿನ ಕೊರತೆ ಪ್ರಮಾಣ ಏನು ಎಂಬುದು ಈ ಋತುವಿನ ಅಂತ್ಯ ಅಂದರೆ, 31.01.2017ರ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ ಎಂಬುದನ್ನೂ ಈ ಸದನ ಗಮನಿಸಿದೆ.
ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ, ಮತ್ತು ಕಬಿನಿ ಇವುಗಳಲ್ಲಿ ನೀರಿನ ಮಟ್ಟ ಅತ್ಯಂತ ತಳಮಟ್ಟದ ಹಂತವನ್ನು ತಲುಪಿರುವುದನ್ನೂ ಮತ್ತು ಈ ಜಲಾಶಯಗಳಲ್ಲಿ ಕೇವಲ 27.6 ಟಿಎಂಸಿ ಮಾತ್ರ ನೀರು ಇರುವುದನ್ನು ಈ ಸದನವು ಆತಂಕದಿಂದ ಪರಿಗಣಿಸಿದೆ.
ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರವೂ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಮಾತ್ರ ಈಗಿರುವ ನಾಲ್ಕು ಜಲಾಶಯಗಳ ಒಟ್ಟಾರೆ ಜಲಸಂಗ್ರಹಣೆಯಿಂದ ನೀರನ್ನು ಬಳಸುವುದು ಅತ್ಯಾವಶ್ಯಕ ಮತ್ತು ಅನಿವಾರ್ಯ ಎಂಬುದನ್ನು ಸರ್ಕಾರವು ಖಾತರಿ ಪಡಿಸಿಕೊಳ್ಳಬೇಕೆಂದು ಈ ಸದನ ನಿರ್ಣಯಿಸುತ್ತದೆ.
ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಜಲಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾ ನಗರವೂ ಸೇರಿದಂತೆ ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ. ಹಾಗೆಯೇ ಸಂಪೂರ್ಣವಾಗಿ ಉಳಿಸಿಕೊಳ್ಳಲು ಮತ್ತು ಇದಕ್ಕೆ ಹೊರತಾದ ಬೇರೆ ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ಅಂಗೀಕರಿಸುತ್ತದೆ.
Comments are closed.