ಕರ್ನಾಟಕ

ನ್ಯಾಯ ಸಿಗೋವರೆಗೂ ಹೋರಾಟ…ಜೈಲ್‍ಭರೋ ಚಳವಳಿಗೆ ಕರೆಕೊಟ್ಟ ಜಿ.ಮಾದೇಗೌಡ

Pinterest LinkedIn Tumblr

21

ಮಂಡ್ಯ: ಮನೆಗೊಬ್ಬರಂತೆ ಚಳವಳಿಗೆ ಬನ್ನಿ.ಜೈಲ್‍ಭರೋ ಚಳವಳಿ ನಡೆಸೋಣ. ನ್ಯಾಯ ಸಿಗೋವರೆಗೂ ಹೋರಾಟ ಮುಂದುವರಿಸೋಣ ಎಂದು ಕಾವೇರಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಕರೆಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಕಾವೇರಿ ಕೈಜಾರುತ್ತಿರುವ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಮಂಡ್ಯ ಜನತೆಯ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ. ಮನೆಗೊಬ್ಬರಂತೆ ಚಳವಳಿಗೆ ಎಲ್ಲರೂ ಬನ್ನಿ. ಜೈಲ್‍ಭರೋ ಚಳವಳಿ ನಡೆಸುವ ಮೂಲಕ ನ್ಯಾಯ ಪಡೆಯೋಣ. ಅನ್ಯಾಯ ಖಂಡಿಸೋಣ ಎಂದು ಜಿ.ಮಾದೇಗೌಡ ಕರೆ ನೀಡಿದ್ದಾರೆ.

ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಳವಳಿ ಮುಂದುವರೆದಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕಾವೇರಿ ಉಳಿಸಿಕೊಳ್ಳಲು ನಾವು ಯಾವ ತ್ಯಾಗಕ್ಕಾದರೂ ಸಿದ್ಧವಾಗಿದ್ದೇವೆ, ಎಷ್ಟೇ ಪ್ರತಿರೋಧ ವ್ಯಕ್ತವಾದರೂ ನಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ , ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟದಲ್ಲಿ ಪಾಲ್ಗೊಂಡು ಜನರ ಹಿತ ಕಾಪಾಡಲು ಮುಂದಾಗಬೇಕೆಂದು ಅವರು ಹುರಿದುಂಬಿಸಿದ್ದಾರೆ.

ಕಾವೇರಿ ನೀರು ತಮಿಳುನಾಡಿಗೆ ಬಿಡುವಂತೆ ಮೇಲಿಂದ ಮೇಲೆ ತೀರ್ಪು ನೀಡಿ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಸುಪ್ರೀಂಕೋರ್ಟ್ ನಮ್ಮ ರಾಜ್ಯದ ವಾದವನ್ನು ಅಲಿಸುವ ಸೌಜನ್ಯವನ್ನು ತೋರುತ್ತಿಲ್ಲ , ಈ ತೀರ್ಪನ್ನು ಧಿಕ್ಕರಿಸಿ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು. ನಾವೆಲ್ಲರೂ ಸರ್ಕಾರದ ಜೊತೆ ಇರುತ್ತೇವೆ ಎಂದು ಮಂಡ್ಯ ಜನತೆ ಹೇಳಿದ್ದಾರೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿಗಳಲ್ಲಿ ನಿಷೇಧಾಜ್ಞೆ , ಭಾರೀ ಪೊಲೀಸ್ ಬಂದೋಬಸ್ತ್ ನಡುವೆಯೂ ಇಂದು ಹಲವೆಡೆ ಪ್ರತಿಭಟನೆಗಳು ಮುಂದುವರೆದಿದ್ದು ತೀರ್ಪು ವಿರೋಧಿಸಿ ಇಲ್ಲಿನ ಜನ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಇಳಿದಿದ್ದಾರೆ.

ಮತ್ತೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದೇ ಅಲ್ಲದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿ ಕಾವೇರಿ ಕೊಳ್ಳದ ಜನರಿಗೆ ಮರಣ ಶಾಸನ ಬರೆದಿದೆ ಎಂದು ಆರೋಪಿಸಿ ಪಿ.ಎಂ.ದ್ಯಾವಪ್ಪ , ರಫೀವುಲ್ಲಾ, ರಾಜುಗೌಡ, ನೂರುಲ್ಲಾ ಎಂಬುವವರು ನಿನ್ನೆ ರಾತ್ರಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ನಿರಶನ ಕೈಗೊಂಡಿದ್ದಾರೆ. ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ, ಧರಣಿ ಆರಂಭಿಸಿದ್ದು ಶುಭದಾಯಿನಿ, ಮೀರಾ ಶಿವಲಿಂಗಯ್ಯ ನೇತೃತ್ವದಲ್ಲಿ ತೀರ್ಪು ಖಂಡಿಸಿ ರ್ಯಾಲಿ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಕಾವೇರಿ ಕೊಳ್ಳದ ಜನಪ್ರತಿನಿಧಿಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಂಸದ ಪುಟ್ಟರಾಜು ಅವರು ಈಗಾಗಲೇ ತಮ್ಮ ರಾಜೀನಾಮೆಯನ್ನು ರವಾನಿಸಿದ್ದು ಇಂದು ಹಲವು ಶಾಸಕರು ರಾಜೀನಾಮೆ ಕೊಡಲು ಮುಂದಾಗಿದ್ದು ತಮ್ಮ ಪಕ್ಷದ ನಾಯಕರ ಜೊತೆ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದು ಅಗತ್ಯ ಬಿದ್ದರೆ ಅಧಿಕಾರ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಶ್ರೀರಂಗಪಟ್ಟಣದಲ್ಲೂ ತೀರ್ಪು ವಿರೋಧಿಸಿ ಇಲ್ಲಿನ ಜನ ಪೊರೆಕೆ ಚಳವಳಿ ಮಾಡಿದ್ದಾರೆ. ಆರುಂಧತಿರಾಯ್ ಸಂಘಟನೆಯಿಂದ ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸುಪ್ರೀಂಕೋರ್ಟ್ ತೀರ್ಪು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ತಡೆದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.

ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದರಿಂದ ನಾವು ಭತ್ತ ಕಿತ್ತು ಹುರುಳಿ ಬೆಳೆಯುವಂತಾಗಿದೆ ಎಂದು ರೈತ ಹೋರಾಟಗಾರರು ಆರೋಪಿಸಿ ಉಪ್ಪರ್‍ನಾಯಕನಹಳ್ಳಿ ಬಳಿ ಗ್ರಾಮಸ್ಥರು ಹುರುಳಿ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 4000ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಹೊರ ರಾಜ್ಯಗಳಿಂದ ಪೊಲೀಸರನ್ನು ಕರೆಸಲಾಗಿದೆ. ಆರ್‍ಎಎಫ್ , ಕೆಎಸ್‍ಆರ್‍ಪಿ, ಸಿಆರ್‍ಪಿಎಫ್‍ಗಳನ್ನು ನಿಯೋಜಿಸಲಾಗಿದೆ. ಆಯಾ ವಿಭಾಗದ ಡಿಸಿಪಿಗಳು ಬಂದೋಬಸ್ತ್ ಹೊಣೆ ಹೊತ್ತಿದ್ದು , ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಾವೇರಿ ಕಿಚ್ಚು ತುಮಕೂರಿನಲ್ಲೂ ಹೆಚ್ಚಾಗಿದೆ. ತುಮಕೂರು ಜನತೆ ಇಂದು ದಿಢೀರ್ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದ್ದಾರೆ. ತುಮಕೂರು- ಮೈಸೂರು ರಸ್ತೆ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.