ಬೆಂಗಳೂರು, ಸೆ.೧೫: ಕಾವೇರಿ ಮತ್ತು ಮಹದಾಯಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ಸಂಕಲ್ಪ ತೊಟ್ಟಿರುವ ಪ್ರಧಾನಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹುನ್ನಾರ ನಡೆಸಿದಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಕಾವೇರಿ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕಾವೇರಿ ವಿವಾದವನ್ನು ಎರಡೂ ರಾಜ್ಯಗಳು ಪರಸ್ಪರ ಒಪ್ಪಿ ತೀರ್ಮಾನ ಕೈಗೊಂಡರೆ ಅಂತಿಮ ತೀರ್ಪು ರದ್ದಾಗುತ್ತದೆ ಎಂದು ಕಾವೇರಿ ಅಂತಿಮ ತೀರ್ಪಿನಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದನ್ನು ಮರೆಮಾಚಿ ವಿವಾದ ಕೋರ್ಟ್‌ನಲ್ಲಿರುವುದರಿಂದ ಪ್ರಧಾನಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರು ಹೇಳುವ ಮೂಲಕ ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಹಿಂದೆಯೂ ಎರಡು ರಾಜ್ಯಗಳ ನಡುವೆ ವಿವಾದ ಉಂಟಾದಾಗ ದೇಶದ ಪ್ರಧಾನಿ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿದ ಇತಿಹಾಸವಿದೆ. ಆದರೆ ಮೋದಿ ಅವರು ಅಂತಾರಾಜ್ಯ ಸಮಸ್ಯೆ ಉಂಟಾದಾಗ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇಶದ ನಾಯಕತ್ವ ವಹಿಸಿರುವ ಪ್ರಧಾನಿ ಅವರು ಎರಡೂ ರಾಜ್ಯಗಳ ಮುಖಂಡರನ್ನು ಕರೆದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಅವರಿಗೆ ೫ ಪತ್ರ ಬರೆದಿದ್ದರೂ ಇದುವರೆಗೂ ಒಂದು ಪತ್ರಕ್ಕೂ ಉತ್ತರ ಬಂದಿಲ್ಲ. ಮುಖ್ಯಮಂತ್ರಿ ಅವರ ಕಚೇರಿ ನಿರಂತರವಾಗಿ ಪ್ರಧಾನಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದೆ. ಆದರೆ ಇದುವರೆಗೆ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದೆನ ಬಂದಿಲ್ಲ. ಪ್ರಧಾನಿ ಅವರ ಈ ನಿಲುವು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಅನಂತ್‌ಕುಮಾರ್, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಪಲಾಯನ ವಾದ ಅನುಸರಿಸುತ್ತಿದ್ದು, ಇದುವರೆಗೂ ಅವರು ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ವಿವಾದದ ಬಗ್ಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಅವರು ಹೇಳಿಲ್ಲ. ಇದು ಕೂಡ ಸಂಶಯಕ್ಕೆ ಎಡೆಮಾಡಿದೆ ಎಂದು ಹೇಳಿದರು.
ಕರ್ನಾಟಕ
Comments are closed.