ಕರ್ನಾಟಕ

ಕಾವೇರಿ ಗಲಾಟೆ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಉಮೇಶ್ ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ. ಪರಿಹಾರ

Pinterest LinkedIn Tumblr

umesh

ಬೆಂಗಳೂರು: ಹೆಗ್ಗನಹಳ್ಳಿ ಬಳಿ ಪೊಲೀಸರ ಗುಂಡೇಟಿಗೆ ಬಲಿಯಾದ ಉಮೇಶ್ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ. ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಇದನ್ನು ಘೋಷಿಸಿದ್ದಾರೆ.

ಇದೇ ವೇಳೆ, ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯು ಉಮೇಶ್ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೇ, ಮೃತ ಉಮೇಶ್ ಪತ್ನಿ ಕಲಾವತಿಗೆ ಸರಕಾರೀ ಉದ್ಯೋಗ ಕೊಡುವಂತೆ ರಾಜ್ಯ ಸರಕಾರವನ್ನು ನಾರಾಯಣಗೌಡರು ಒತ್ತಾಯಿಸಿದ್ದಾರೆ.

ಇತ್ತ, ಸ್ಯಾಂಡಲ್ವುಡ್ ಹೀರೋ ಪುನೀತ್ ರಾಜಕುಮಾರ್ ಅವರು ಕೂಡ ಉಮೇಶ್ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಕೊಡಲು ನಿರ್ಧರಿಸಿದ್ದಾರೆ. ಜೊತೆಗೆ, ನಿನ್ನೆಯ ಗೋಲಿಬಾರ್’ನಲ್ಲಿ ಗಾಯಗೊಂಡಿದ್ದ ಮೋಹನ್ ಎಂಬುವವರಿಗೂ 50 ಸಾವಿರ ಪರಿಹಾರ ನೀಡುವುದಾಗಿ ಪುನೀತ್ ತಿಳಿಸಿದ್ದಾರೆ.

ನಿನ್ನೆ ಹೆಗ್ಗನಹಳ್ಳಿಯಲ್ಲಿ ಉದ್ರಿಕ್ತ ಜನರು ಪೊಲೀಸ್ ವಾಹನವನ್ನು ಜಖಂ ಮಾಡಿದ್ದರು. ಈ ವೇಳೆ ಅರೆಸೇನಾ ಪಡೆಯು ಗುಂಪನ್ನು ಚದುರಿಸಲು ಫೈರಿಂಗ್ ನಡೆಸಿತ್ತು. ಆದರೆ, ಜೆಪಿ ನಗರದಿಂದ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ ಹೋಗುವಾಗ ಉಮೇಶ್ ಅವರು ಆಕಸ್ಮಿಕವಾಗಿ ಆ ಗಲಾಟೆಯ ಪ್ರದೇಶದತ್ತ ಬಂದಿದ್ದರು. ದುರದೃಷ್ಟವಶಾತ್ ಈ ವೇಳೆ ಗುಂಡು ತಾಕಿ ಉಮೇಶ್ ಮೃತಪಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ 29 ವರ್ಷದ ಉಮೇಶ್ ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ. ಆತನ ಪತ್ನಿ ಕಲಾವತಿ ಸದ್ಯ 7 ತಿಂಗಳ ತುಂಬುಗರ್ಭಿಣಿಯೂ ಆಗಿದ್ದಾರೆ. ಬೆಂಗಳೂರು ಸಮೀಪದ ಹುಲಿಯೂರು ದುರ್ಗದ ಬಳಿಯ ಗ್ರಾಮದವರಾದ ಉಮೇಶ್ ಕುಟುಂಬ ಅಕ್ಷರಶಃ ನಲುಗಿಹೋಗಿದೆ.

Comments are closed.