ಕರ್ನಾಟಕ

ಸರ್ಕಾರ ಕೂಡಲೇ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು : ಯಡಿಯೂರಪ್ಪ

Pinterest LinkedIn Tumblr

bsyಮಂಡ್ಯ, ಸೆ.11- ರೈತರು ಸಂಕಷ್ಟಕ್ಕೆ ಸಿಲುಕಲು ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಹರಿಹಾಯ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬೆಳೆನಷ್ಟ ಉಂಟಾಗಿರುವ ರೈತರಿಗೆ ಎಕರೆಗೆ ಕೂಡಲೇ 25 ಸಾವಿರ ರೂ. ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೇ ನೀರಿಲ್ಲ. ನಿಮಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರು ಹರಿಸುವುದಾಗಿ ಹೇಗೆ ಒಪ್ಪಿಕೊಂಡರೋ ತಿಳಿಯುತ್ತಿಲ್ಲ. ಇಂದಿನ ಈ ಪರಿಸ್ಥಿತಿಗೆ ಮುಖ್ಯಮಂತ್ರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಆರೋಪಿಸಿದರು.’

ಕಾವೇರಿ ನೀರಿನ ಸಮಸ್ಯೆ, ರೈತರಿಗಾಗಿರುವ ಬೆಳೆನಷ್ಟ ಹಾಗೂ ಕುಡಿಯುವ ನೀರಿನ ನಿರ್ವಹಣೆ ಇತ್ಯಾದಿ ವಿಷಯಗಳನ್ನು ಚರ್ಚಿಸಲು ಎರಡು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನವನ್ನು ಕರೆಯಬೇಕೆಂದು ಅವರು ಒತ್ತಾಯಿಸಿದರು. ಪರಿಸ್ಥಿತಿ ಮಿತಿ ಮೀರಿದಾಗ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಸುಪ್ರೀಂಕೋರ್ಟ್‍ಗೆ ಅಫಿಡೆವಿಟ್ ಹಾಕುವ ಮೊದಲೇ ಮಧ್ಯಸ್ಥಿಕೆ ವಹಿಸಿ ಎಂದು ಕೇಳಿಕೊಳ್ಳಬಹುದಿತ್ತು ಎಂದು ಹೇಳಿದರು. ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ. ತಮಿಳುನಾಡಿಗೆ ನೀರು ಹರಿಸಿ ಇಲ್ಲಿನ ಸಮಸ್ಯೆ ನಿರ್ವಹಿಸಲು ಎಲ್ಲಿಂದ ನೀರು ತರುತ್ತೀರಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಯಡಿಯೂರಪ್ಪ, ಇದಕ್ಕೆಲ್ಲಾ ಸರ್ಕಾರದ ಬೇಜವಾಬ್ದಾರಿ ಕಾರಣವಾಗಿದೆ ಎಂದರು.

ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಕೆಆರ್‍ಎಸ್, ಮಂಡ್ಯ ಇತರೆ ಭಾಗಗಳಲ್ಲಿ ರೈತ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು 24 ಗಂಟೆಯೊಳಗೆ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ಮಾಜಿ ಸಚಿವ ಆತ್ಮಾನಂದ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ನಗರ ಬಿಜೆಪಿ ಅಧ್ಯಕ್ಷ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.

Comments are closed.