ಕರ್ನಾಟಕ

ಸೆ.30ರೊಳಗೆ ಪಡಿತರಚೀಟಿಗಳಿಗೆ ಆಧಾರ್ ಲಿಂಕ್ ಕಡ್ಡಾಯ

Pinterest LinkedIn Tumblr

ration_adara_epiccno

ಬೆಂಗಳೂರು, ಸೆ.10: ಈ ತಿಂಗಳ ಅಂತ್ಯದೊಳಗೆ ಆಧಾರ್ ಲಿಂಕ್ ಮಾಡದ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು. ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಪಡಿತರ ಚೀಟಿ ಗಳಿಗೆ ಆಧಾರ್ ಲಿಂಕ್ ಮಾಡಲು ಈ ತಿಂಗಳ 30ರವರೆಗೆ ಅವಕಾಶವಿದೆ ಎಂದರು.

ಕುಟುಂಬದ ಒಬ್ಬರ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೂ ಅಂತಹ ಹೆಸರುಗಳನ್ನು ಪಡಿತರಚೀಟಿಯಿಂದ ಅಳಿಸಿ ಹಾಕಲಾಗುವುದು. ನಂತರ ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಆ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತೆ ಆ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಅಕ್ಟೋಬರ್, ನವೆಂಬರ್, ಡಿಸೆಂಬರ್ ಈ ಮೂರೂ ತಿಂಗಳಿಗೆ ಪಡಿತರ ಕೂಪನ್‍ಗಳನ್ನು ಏಕಕಾಲಕ್ಕೆ ನೀಡಲಾಗಿದೆ.

ಈ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವ ಇರುವುದರಿಂದ ಮೊಬೈಲ್ ಮಿಷನ್ ಮೂಲಕ ಕೂಪನ್ ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಪಡಿತರಚೀಟಿ ಮತ್ತು ಅವುಗಳ ವಿತರಣೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಜನವರಿಯಿಂದ ಹೊಸ ಕಾರ್ಡ್‍ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು. ನಗರ ಪ್ರದೇಶದಲ್ಲಿ ಶೇ.72ರಷ್ಟು ಪಡಿತರ ಚೀಟಿಗಳಿಗೆ ಮಾತ್ರ ಆಧಾರ್ ಲಿಂಕ್ ಮಾಡಲಾಗಿದೆ.

ಬೋಗಸ್ ಎಂದು ಪರಿಗಣನೆ:
ಆಧಾರ್ ಲಿಂಕ್ ಇಲ್ಲದ ಪಡಿತರ ಚೀಟಿಗಳನ್ನು ಬೋಗಸ್ ಎಂದು ಪರಿಗಣಿಸಲಾಗುವುದು. ಇದಕ್ಕಾಗಿ ಪರಿಶೀಲನಾ ಸಮಿತಿ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಆಹಾರ ಪೂರೈಕೆ ಸೂಪರ್‍ವೈಸರ್ ಅವರಿಗೆ ಪಡಿತರ ಚೀಟಿ ವಿತರಣೆ ಅಧಿಕಾರ ನೀಡಲಾಗಿತ್ತು. ಈಗ ಇದನ್ನು ಸರಳೀಕೃತಗೊಳಿಸಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಈ ಅಧಿಕಾರ ನೀಡಲಾಗಿದೆ.

ಎಲ್ಲ ಕಾರ್ಡ್‍ದಾರರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್‍ಗಳನ್ನು ಕಳುಹಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲೂ ಏಕಕಾಲಕ್ಕೆ ಮೂರು ತಿಂಗಳ ಕೂಪನ್ ನೀಡುವ ವ್ಯವಸ್ಥೆ ಮಾಡಲಾಗುವುದು. ಇದು ಮುಂದಿನ ತಿಂಗಳಿನಿಂದಲೇ ( ಅಕ್ಟೋಬರ್) ಜಾರಿಯಾಗಲಿದೆ. ಪ್ರಸ್ತುತ ನಗರ ಪ್ರದೇಶದಲ್ಲಿ 5,538 ನ್ಯಾಯಬೆಲೆ ಅಂಗಡಿಗಳಲ್ಲಿ 31,49,948 ಪಡಿತರಚೀಟಿದಾರರು ಈ ರೀತಿ ಕೂಪನ್ ಪಡೆದಿದ್ದಾರೆ. ಇಷ್ಟು ಜನ ಕಾರ್ಡ್‍ದಾರರ ಪೈಕಿ ಒಟ್ಟು 15,19,854 ಮಂದಿ ಪಡಿತರ ಪಡೆದಿದ್ದಾರೆ.

ಆನ್‍ಲೈನ್‍ನಲ್ಲಿ ಅರ್ಜಿ:
ಬಿಪಿಎಲ್ ಮತ್ತು ಎಪಿಎಲ್ ಹೊಸ ಚೀಟಿಗಳನ್ನು ಪಡೆಯಲು ಫಲಾನುಭವಿಗಳು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಆನ್‍ಲೈನ್ ಮೂಲಕವೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಈಗಾಗಲೇ ಅನುಮತಿ ಸಿಕ್ಕಿದೆ. ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಂದ ಇನ್ನು ಈ ಬಗ್ಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.

Comments are closed.