ಕರ್ನಾಟಕ

ರಾಜಧಾನಿಯಲ್ಲಿ ಜನದನಿ ಭುಗಿಲು

Pinterest LinkedIn Tumblr

baಬೆಂಗಳೂರು, ಸೆ.೯: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಧ ಕನ್ನಡ ಮತ್ತು ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.
ಬೆಳಗ್ಗೆಯಿಂದಲೇ ನೂರಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ವಾಹನ ಸಂಚಾರ ತಡೆದರು. ನಗರದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಎಲ್ಲೆಲ್ಲೂ ಆಕ್ರೋಶ, ಸಿಟ್ಟು ಕಂಡುಬಂತು.
ನಗರದ ಹೃದಯಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಸ್ವಂತ ವಾಹನ ಹೊಂದಿರುವವರು ಮಾತ್ರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗುತ್ತಿದ್ದು, ವಿಮಾನ ನಿಲ್ದಾಣದ ಆವರಣ ರೈಲು ನಿಲ್ದಾಣದಂತೆ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದವು. ಪ್ರಯಾಣಿಕರು ಅಲ್ಲಿಂದ ಗಮ್ಯ ಸೇರಲಾಗದೆ ಚಡಪಡಿಸುವ ದೃಶ್ಯ ಕಂಡುಬಂತು. ಬೆಳಗ್ಗೆ ವಿಮಾನ ನಿಲ್ದಾಣ ತಲುಪಲು ಆಗದ ಆತಂಕದಿಂದ ಪ್ರಯಾಣಿಕರು ಗುರುವಾರ ರಾತ್ರಿಯೇ ಬಂದು ಆವರಣದಲ್ಲಿ ಮಲಗಿರುವ ದೃಶ್ಯ ಕಂಡು ಬಂದಿದೆ.
ಸರಕಾರಿ ಕಚೇರಿ, ಹೈಕೋರ್ಟ್, ಕೋರ್ಟ್‌ಗಳು, ಎಪಿಎಂಸಿ ಮತ್ತು ಇತರ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡಿದ್ದವು. ಅಂಗಡಿ, ಹೋಟೆಲ್‌ಗಳು ಕೂಡ ಬಾಗಿಲು ಮುಚ್ಚಿದ್ದು, ಪೆಟ್ರೋಲ್ ಬಂಕ್ ಬಂದ್ ಆಗಿರುವ ಕಾರಣ ವಾಹನ ಸವಾರರು ಪೆಟ್ರೋಲ್ ಇಲ್ಲದೆ ಪರದಾಡುವಂತಾಯಿತು.
ಪುರಭವನದ ಎದುರು, ಫ್ರೀಡಂ ಪಾರ್ಕ್, ಮೈಸೂರು ಬ್ಯಾಂಕ್ ವೃತ್ತ, ಆನಂದ ರಾವ್ ವೃತ್ತ ಸೇರಿದಂತೆ ಹಲವೆಡೆ ಸರಣಿ ಪ್ರತಿಭಟನೆಗಳು ನಡೆದವು. ಬಿಜೆಪಿ ಕಾರ್ಯಕರ್ತರು ಲಕ್ಕಸಂದ್ರ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಮಡಿವಾಳದಿಂದ ಟೌನ್‌ಹಾಲ್‌ವರೆಗೆ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.
ಜಯನಗರದಲ್ಲಿ ಶಾಸಕ ವಿಜಯಕುಮಾರ್ ಮತ್ತು ಕಾರ್ಪೋರೇಟರ್ ಎನ್. ನಾಗರಾಜು ನೇತೃತ್ವದಲ್ಲಿ ೮೦೦ಕ್ಕೂ ಅಧಿಕ ಮಂದಿ ಬೈಕ್ ರ್‍ಯಾಲಿ ನಡೆಸಿ ಬಂದ್‌ಗೆ ಬೆಂಬಲ ನೀಡಿದರು.
ಜಯ ಕರ್ನಾಟಕ ಕಾರ್ಯಕರ್ತರು ನಗರದ ವಿಶ್ವೇಶ್ವರಯ್ಯ ಟವರ್‌ಗೆ ನುಗ್ಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಮುಖ್ಯದ್ವಾರಕ್ಕೆ ಬೀಗಜಡಿದರು.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಚೇರಿಯಿಂದ ಹೊರಗೆ ಕಳುಹಿಸಿದರು. ಮಾತ್ರವಲ್ಲ, ನಾಡಿನ ನೆಲ-ಜಲದ ವಿಷಯದಲ್ಲಿ ಕನಿಷ್ಠ ಮಾನವೀಯತೆಯೂ ಇಲ್ಲ. ಇಲ್ಲಿನ ನೆಲ-ಜಲ ನೀರು ಬೇಕು. ಆದರೆ ಇಲ್ಲಿನ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಲನಚಿತ್ರ ರಂಗದ ಪ್ರಮುಖರು, ನಟರು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕ್ ನೌಕರರು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕಚೇರಿಗಳು ಕಾರ್ಯನಿರ್ವಹಿಸಿಲ್ಲ. ಶಾಲಾ ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳ ಪರದಾಟ ತಪ್ಪಿದಂತಾಯಿತು.

ಬಿಬಿಎಂಪಿ ಕಚೇರಿಗೆ ಹಾಜರಾಗದ ಸಿಬ್ಬಂದಿ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಬಿಬಿಎಂಪಿ ಪರೋಕ್ಷ ಬೆಂಬಲ ನೀಡಿದ್ದರ ಹಿನ್ನೆಲೆಯಲ್ಲಿ ಇಂದು ಕೇಂದ್ರ ಕಚೇರಿಯೂ ಸೇರಿದಂತೆ ೮ ವಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ಸಂಖ್ಯೆ ವಿರಳವಾಗಿತ್ತು.
ಕೇಂದ್ರ ಕಚೇರಿಯಲ್ಲಂತೂ ಸಿಬ್ಬಂದಿಗಳು ಹಾಜರಾಗದೆ ಇದ್ದುದರಿಂದ ಕಚೇರಿಯ ಬೀಗವನ್ನೇ ತೆರೆದಿರಲಿಲ್ಲ. ಇಡೀ ಕಚೇರಿಯ ಆವರಣ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇಲ್ಲದೆ ಮೌನಕ್ಕೆ ಶರಣಾಗಿತ್ತು. ಇಂದು ಬೆಳಿಗ್ಗೆ ವಾಹನ ಸೌಲಭ್ಯ ಇದ್ದವರು ಕಚೇರಿಗೆ ತೆರಳುತ್ತಿದ್ದಾಗ ವಿವಿಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಧ್ಯದಲ್ಲೇ ತಡಹಾಕಿ ವಾಪಸ್ಸು ಕಳುಹಿಸಿದ್ದರಿಂದ ಅಧಿಕಾರಿ ಮತ್ತು ನೌಕರರು ಕಚೇರಿಯತ್ತ ಸುಳಿಯಲಿಲ್ಲ. ಬಹುತೇಕ ಮಹಿಳಾ ನೌಕರರು ಬಂದ್ ವೇಳೆ ಅಹಿತಕರ ಘಟನೆ ನಡೆಯಬಹುದು ಎಂಬ ಭೀತಿಯಿಂದ ಮನೆಬಿಟ್ಟು ಹೊರಹೋಗುವ ಸಾಹಸ ಮಾಡಲಿಲ್ಲ. ಹೆಚ್ಚಿನ ಕಚೇರಿಗಳಿಗೆ ನಿನ್ನೆ ರಾತ್ರಿ ಹಾಕಿದ್ದ ಬೀಗವನ್ನೇ ಮಧ್ಯಾಹ್ನವಾದರೂ ತೆಗೆದಿರಲಿಲ್ಲ.
ಪೌರ ಕಾರ್ಮಿಕರ ಪ್ರತಿಭಟನೆ
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಪ್ರತಿಭಟಿಸಿ ಪೌರ ಕಾರ್ಮಿಕರು ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿ ಇಂದು ಬೆಳಿಗ್ಗೆ ಪೊರಕೆಗಳನ್ನು ಬದಿಗಿಟ್ಟು ಕೆಲಸವನ್ನು ಸ್ಥಗಿತಗೊಳಿಸಿದರು. ರಾಜರಾಜೇಶ್ವರಿ ನಗರ, ಯಲಹಂಕ, ದಾಸರಹಳ್ಳಿ ಸೇರಿದಂತೆ ಇತರ ವಲಯಗಳಲ್ಲಿ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.

ಮಹಾಗಣಪತಿ ಹೋಮ
ರಾಜ್ಯದಲ್ಲಿ ಉತ್ತಮ ಮಳೆ ಬರುವಂತೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸದ್ಬುದ್ಧಿ ನೀಡುವಂತೆ ಚಾಮರಾಜಪೇಟೆಯ ಕನ್ನಡ ಸಂಸ್ಕೃತಿ ಕೇಂದ್ರ ಮತ್ತು ಕನ್ನಡ ಕೇಂದ್ರದ ಕಾರ್ಯಕರ್ತರು ಟೌನ್ ಹಾಲ್ ಎದುರು ಮಹಾಗಣಪತಿ ಹೋಮ ನಡೆಸಿದರು.
ಬೆಳಿಗ್ಗೆ ೯ ಗಂಟೆಯಿಂದ ಪುರೋಹಿತರಾದ ರಾಮಚಂದ್ರಶಾಸ್ತ್ರಿ ಅವರ ನೇತೃತ್ವದಲ್ಲಿ ಕಾವೇರಿ ನೀರಿಗಾಗಿ ಗಣಹೋಮ ನಡೆಸಲಾಯಿತು.
ಮಧ್ಯಾಹ್ನ ೧ ಗಂಟೆಯ ವೇಳೆಗೆ ಗಣಪತಿ ಹೋಮಕ್ಕೆ ಪೂರ್ಣಾಹುತಿ ನೀಡಿ ಇನ್ನು ಮುಂದಾದರು ಜಯಲಲಿತಾ ಅವರು ಕಾವೇರಿ ನೀರಿಗಾಗಿ ಜಗಳ ತೆಗೆಯುವುದನ್ನು ತಪ್ಪಿಸುವಂತೆ ವಿಶೇಷ ಪ್ರಾರ್ಥನೆ ನಡೆಸಿದರು.

Comments are closed.