ಕರ್ನಾಟಕ

ಅಪಾರ್ಟ್‌ಮೆಂಟ್ಸ್, ಮಾಲ್‌ಗಳಿಗೂ ಗ್ರಹಚಾರ

Pinterest LinkedIn Tumblr

Rajakaluveಬೆಂಗಳೂರು, ಆ. ೧೪- ನಗರದಲ್ಲಿ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿರುವ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳನ್ನು ಸರ್ಕಾರ ನೆಲಸಮಗೊಳಿಸಲಿದೆಯೇ ಎಂಬುದು ಸದ್ಯದ ಮಟ್ಟಿಗಂತೂ ಯಕ್ಷ ಪ್ರಶ್ನೆಯಾಗಿದೆ.

ಪ್ರಭಾವಿ ಬಿಲ್ಡರ್‌ಗಳನ್ನು ಎದುರುಹಾಕಿಕೊಂಡು ಅವರ ನಿರ್ಮಾಣದ ಕಟ್ಟಡಗಳನ್ನು ನೆಲಸಮಗೊಳಿಸುವ ಧೈರ್ಯ ಸರ್ಕಾರಕ್ಕಿದೆಯೇ ಎಂಬ ಪ್ರಶ್ನೆ ಸರ್ಕಾರದ ಅಧಿಕಾರಿ ವಲಯದಲ್ಲೇ ಹರಿದಾಡುತ್ತಿದೆ.

ಸದ್ಯ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಜನಸಾಮಾನ್ಯರ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಇತರೆ ವಲಯಗಳಲ್ಲಿ ಮಂಗಳವಾರದಿಂದ ಮುಂದುವರೆಯಲಿದೆ.

ಈಗಂತೂ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರತಿಷ್ಠಿತ ಬಿಲ್ಡರ್‌ಗಳು, ಮಾಲ್‌ಗಳ ಮಾಲೀಕರಿಗೆ ಸರ್ಕಾರದ ನಿಷ್ಠುರ ಕ್ರಮ ನಡುಕವನ್ನುಂಟು ಮಾಡಿದ್ದರೂ, ಕಾರ್ಯಾಚರಣೆ ತಡೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಸರ್ಕಾರ ಜನಸಾಮಾನ್ಯರ ಮನೆಗಳನ್ನು ಒಡೆದು ಹಾಕುವತ್ತ ಮಾತ್ರ ಗಮನ ಹರಿಸಿದೆ. ಪ್ರಭಾವಿ ಬಿಲ್ಡರ್‌ಗಳ ನಿರ್ಮಾಣದ ಕಟ್ಟಡಗಳತ್ತ ಕಣ್ಣೆತ್ತೂ ನೋಡಿಲ್ಲ.

`ಬೀಸೋ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು’ ಎಂಬಂತೆ ಪ್ರಭಾವಿ ಸಂಸ್ಥೆಗಳು ಸದ್ದಿಲ್ಲದೆ ಕಟ್ಟಡ ಉಳಿಸಿಕೊಳ್ಳುವ ತಂತ್ರಗಾರಿಕೆ ಆರಂಭಿಸಿವೆ ಎನ್ನಲಾಗಿದೆ.

ಕಳೆದೊಂದು ವಾರದಿಂದಲೂ ಮಧ್ಯಮ ವರ್ಗದವರ ಮನೆಗಳೇ ನೆಲಕ್ಕುರುಳುತ್ತಿವೆ. ರಾಜಕಾಲುವೆ, ಕೆರೆ, ಗೋಮಾಳ ನುಂಗಿ ಗಗನಚುಂಬಿ ಕಟ್ಟಡ ನಿರ್ಮಿಸಿರುವವರ ವಿರುದ್ಧ ಕ್ರಮ ಏನು? ಎಂಬ ಪ್ರಶ್ನೆಗೆ ಸರ್ಕಾರ, ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರ ಇಲ್ಲ.
ರಾಜಕಾಲುವೆ ಒತ್ತುವರಿದಾರರು ಯಾರೇ ಇದ್ದರೂ ಅವರ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳ ಮಾತಿನ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡುತ್ತಿಲ್ಲ.
ಸರ್ಕಾರದ ರೋಷಾವೇಶದ ಮಾತುಗಳು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 857 ಕಿ.ಮೀ. ಉದ್ದದ ರಾಜಕಾಲುವೆಗಳು ಸುಮಾರು 3,428 ಎಕರೆ ವಿಸ್ತೀರ್ಣದ ಬಫರ್ ಜೋನ್ ಪ್ರದೇಶ ಗುರುತಿಸಲಾಗಿದೆ.
ಈ ಪೈಕಿ 400 ಕಿ.ಮೀ. ಉದ್ದದ ರಾಜಕಾಲುವೆಗಳು ಮತ್ತು 1,500 ಎಕರೆಗಳಷ್ಟು ವಿಸ್ತೀರ್ಣದ ಬಫರ್ ಜೋನ್ ಕಾನೂನು ಬಾಹಿರವಾಗಿ ಒತ್ತುವರಿಯಾಗಿದೆ ಎಂಬುದು ದಾಖಲೆಗಳಲ್ಲಿ ದೃಢಪಟ್ಟಿದೆ.
ಒಂದು ಅಂದಾಜಿನ ಪ್ರಕಾರ ನಗರದಲ್ಲಿ 668 ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಗಳು 29 ಟೆಕ್ ಪಾರ್ಕ್‌ಗಳು, 150ಕ್ಕೂ ಹೆಚ್ಚು ಐಟಿಬಿಟಿ ಕಂಪನಿಗಳು, 30ಕ್ಕೂ ಹೆಚ್ಚು ಮಾಲ್ ಹಾಗೂ ಮಲ್ಟಿಫ್ಲೆಕ್ಸ್‌ಗಳು, ರಾಜಕಾಲುವೆಗಳನ್ನು ನುಂಗಿ ಕಟ್ಟಡ ನಿರ್ಮಿಸಿವೆ ಎನ್ನಲಾಗಿದೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಚೆನ್ನಾಗಿ ಗೊತ್ತು. ಆದರೆ ಈ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ.
ಪ್ರತಿಷ್ಠಿತ ಸಂಸ್ಥೆಗಳಾದ ಶೋಭಾ, ಪ್ರೆಸ್ಟೀಜ್, ಮಂತ್ರಿ, ಬ್ರಿಗೇಡ್ ನಿತೇಶ್ ಮಹಾವೀರ್, ಎಲ್ ಅಂಡ್ ಟಿ, ಟಾಟಾ ಹೌಸಿಂಗ್ ಕಾರ್ಪೊರೇಷನ್ ಅಲ್ಲದೆ, ಮಾನ್ಯತಾ ಟೆಕ್ ಪಾರ್ಕ್, ಸಲಾರ್ ಪುರಿಯಾ, ಬಾಗ್‌ಮನೆ, ಬೃಂದಾವನ, ಒರಿಯನ್ ಮಾಲ್, ಗರುಡಾ ಮಾಲ್‌ನಂತಹ ಸಂಸ್ಥೆಗಳು ಕೂಡ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ರಾಜಕಾರಣಿಗಳು, ಅಧಿಕಾರಿಗಳಿಗೂ ಗೊತ್ತು.
ಆದರೆ ಈವರೆಗೆ ಇಂತಹ ಪ್ರಭಾವಿ ಸಂಸ್ಥೆಗಳ ನಿರ್ಮಾಣದ ಕಟ್ಟಡಗಳ ಬಗ್ಗೆ ರಾಜಕಾರಣಿಗಳು ಇನ್ನೂ ಸೊಲ್ಲೆತ್ತದಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಅನುಮಾನ ಹುಟ್ಟಿಸಿದೆ.
ರಾಜಕಾಲುವೆ ಒತ್ತುವರಿ ನೆಪದಲ್ಲಿ ಮಧ್ಯಮ ವರ್ಗದವರ ಮನೆಗಳನ್ನು ನೆಲಸಮಗೊಳಿಸುತ್ತಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕಾಲುವೆಗಳನ್ನು ಇಲ್ಲದಂತೆ ಮಾಡಿ ಅಲ್ಲಿ ಬಡಾವಣೆ ನಿರ್ಮಿಸಿ ಅಮಾಯಕರಿಗೆ ಮನಸೋಇಚ್ಛೆ ಮಾರಾಟ ಮಾಡಿ ಕೋಟ್ಯಂತರ ರೂ. ಲೂಟಿ ಮಾಡಿರುವ ಬಿಲ್ಡರ್‌ಗಳ ವಿರುದ್ಧ ಕ್ರಮ ಜರುಗಿಸದೆ ಅಮಾಯಕರ ಮನೆ ಒಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

Comments are closed.