ಬೆಂಗಳೂರು, ಆ. ೧೦ – ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಾಪ್‌ಕಾಮ್ಸ್‌ನ ಎಲ್ಲಾ ಮಳಿಗೆಗಳಲ್ಲಿ ಶೇ. 5ರ ರಿಯಾಯಿತಿ ದರದಲ್ಲಿ ಆಯ್ದ ಹಣ್ಣುಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಾಪ್ ಕಾಮ್ಸ್‌ನ ಅಧ್ಯಕ್ಷ ಜಿ.ಆರ್. ಶ್ರೀನಿವಾಸನ್ ತಿಳಿಸಿದರು.
ಲಾಲ್‌ಬಾಗ್ ಬಳಿಯ ಹಾಪ್‌ಕಾಮ್ಸ್ ಕೇಂದ್ರ ಕಚೇರಿ ಆವರಣದಲ್ಲಿ ಹಣ್ಣುಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಪ್‌ಕಾಮ್ಸ್ ವತಿಯಿಂದ ಈ ಹಿಂದೆ ಹಬ್ಬಗಳ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ ವ್ಯವಸ್ಥೆ ಕಲ್ಪಿಸಿದ್ದು, ಕಳೆದ ಬಾರಿ ರಮ್ಜಾನ್ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯ್ತಿ ದರದಲ್ಲಿ ಹಣ್ಣುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಹಾಪ್‌ಕಾಮ್ಸ್‌ನಿಂದ ಇದೇ ಮೊದಲ ಬಾರಿಗೆ ಅರ್ಧ ಲೀಟರ್ ಮತ್ತು ಒಂದು ಲೀಟರ್ ನೀರಿನ ಬಾಟಲ್ ಮಾರಾಟಕ್ಕೆ ನಿರ್ಧರಿಸಿದ್ದು, ಕೇಂದ್ರ ಕಚೇರಿಯಲ್ಲಿ ಕೈತೋಟಕ್ಕೆ ಸಂಬಂಧಿಸಿದ ಹಣ್ಣು, ತರಕಾರಿ, ಹೂವಿನ ಬೀಜಗಳು, ಪರಿಕರಗಳು ಹಾಗೂ ಎರೆಹುಳು ಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ರೈತರ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಹಾಪ್‌ಕಾಮ್ಸ್ ಶೀಘ್ರದಲ್ಲೇ ಕಸ್ತೂರಿ ನಗರ ಮತ್ತು ಕೆಂಗೇರಿ ಉಪನಗರದಲ್ಲಿ ಆರ್.ಟಿ. ಬಜಾರ್ ಸ್ಥಾಪಿಸಲು ಉದ್ದೇಶಿಸಿದೆ. ಎಲ್ಲಾ ಮಳಿಗೆಗಳಲ್ಲಿ ಕಂಪ್ಯೂಟರೀಕರಣ ವ್ಯವಸ್ಥೆ ಮಾಡಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕೆ ಖಾಸಗಿ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಕೃಷ್ಣ ಮಾತನಾಡಿ, ಕಳೆದ ಜನವರಿಯಿಂದ ಜೂನ್ ತನಕ 241.58 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವ ಹಾಪ್‌ಕಾಮ್ಸ್, ನೌಕರರಿಗೆ 6ನೇ ವೇತನ ಆಯೋಗದಡಿ ವೇತನ ಭತ್ಯೆ ಹೆಚ್ಚಿಸಿದೆ ಎಂದು ತಿಳಿಸಿದರು.
Comments are closed.