ಬೆಂಗಳೂರು, ಆ. ೧೦- ರಾಜಕಾಲುವೆ ಸರಹದ್ದಿನಲ್ಲಿ ಮನೆ ಮಠ ನಿರ್ಮಿಸುವುದು ಸರ್ವಥಾ ಸರಿಯಲ್ಲ. ಆದರೆ ರಾಜಕಾಲುವೆ ಎಂಬುದಕ್ಕೆ ಸುಳಿವೇ ಇಲ್ಲದಂತೆ ಮಾಡಿ ಅಮಾಯಕ ಜನರಿಗೆ ಅದನ್ನು ಮಾರಾಟ ಮಾಡಿದ ಪರಿಣಾಮವೆಂದರೆ ಸರ್ಕಾರಿ ಕೃಪಾಪೋಷಿತ ಒತ್ತುವರಿ.
ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಿ ಅಪರಾಧ ಎದುರಿಸುತ್ತಿರುವವರಿಗೆ ಅಕಾಶವೇ ಉರುಳಿ ಬಿದ್ದ ಅನುಭವ. ಅಪರಾಧಕ್ಕಿಂತ ಮುಖ್ಯವಾಗಿ ನಿಲ್ಲಲು ನೆಲೆಯಿಲ್ಲ- ಮಲಗಲು ಮನೆಯಿಲ್ಲ. ದಳ್ಳಾಳಿಗಳು ಹಾಗೂ ಅಧಿಕಾರಿಗಳ ಕಿಲಾಡಿ ಸಖ್ಯದ ಪರಿಣಾಮವಾಗಿ ಸೂರಿಲ್ಲದ ದುರ್ಗತಿಗೆ ಬಂದಿರುವ ಸಂತ್ರಸ್ತರ ಕೂಗಿಗೆ ಸರ್ಕಾರ ಕಿವುಡು. ಚುನಾಯಿತ ಪ್ರತಿನಿಧಿಗಳಿಗೆ ಜಾಣ ಕುರುಡು. ಈ ಬದುಕ ಮನ್ನಿಸೋ ಪ್ರಭೂ ಎಂಬುದು ಈ ಅಮಾಯಕರ ರೋಧನ.
ದೊಮ್ಮಸಂದ್ರದ ಒತ್ತುವರಿ ಕಾರ್ಯಾಚರಣೆಗೆ ಶಿವಮ್ಮ- ಶಿವಮೂರ್ತಿ ದಂಪತಿ ಬದುಕು ಬಲಿ. ಈ ದಂಪತಿ ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯವರು. ಮುನ್ಸೂಚನೆ ಇಲ್ಲದೆ ಜೆಸಿಬಿಗಳೊಂದಿಗೆ ಮಹಾನಗರಪಾಲಿಕೆ ಸಿಬ್ಬಂದಿ ಹಾಜರಾದಾಗ ದಂಪತಿಗಳು ಹೌಹಾರಿದರು. ಆದರೆ ನೆರೆಹೊರೆಯವರಿಗೂ ಇದೇ ಅವಸ್ಥೆ ಇರುವುದು ಕಂಡು ಬಂದದ್ದೆಲ್ಲಾ ಬರಲಿ ಎಂದು ದೇವರ ಮೇಲೆ ಭಾರ ಹಾಕಿದರು. ಎಷ್ಟೇ ಅತ್ತು ಕರೆದರೂ ಪಾಲಿಕೆ ಸಿಬ್ಬಂದಿ ಮನಸ್ಸು ಕರಗಲಿಲ್ಲ. ಕರಗಿದ್ದು ಇಷ್ಟಪಟ್ಟಿದ್ದ ಮನೆ ಮಾತ್ರ.
ನಿನ್ನೆ ಸಂಜೆ ನಾಲ್ಕೈದು ಮಂದಿ ಬಂದು ಅಳತೆ ಮಾಡಲು ಆರಂಭಿಸಿದರು. ಈ ಬಗ್ಗೆ ಮನೆಯ ಮಾಲೀಕರಿಗೆ ತಿಳಿಸಿದಾಗ, ಮನೆ ಖಾಲಿ ಮಾಡಿ, ಮುಂದೆ ನೋಡೋಣ ಎಂದು ಹೇಳಿದರು. ಇಂದು ಬೆಳಗ್ಗೆ ಪೊಲೀಸರು, ಅಧಿಕಾರಿಗಳು ಬಂದು ಮನೆ ಖಾಲಿ ಮಾಡುವಂತೆ ಸೂಚಿಸಿದಾಗ ದಿಕ್ಕು ತೋಚದೆ ಮನೆ ಸಾಮಗ್ರಿಗಳನ್ನು ಹೊರಗೆ ತಂದು ಹಾಕಿದ್ದೇವೆ. ಇಂದು ರಾತ್ರಿ ಎಲ್ಲಿ ತಂಗಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಶಿವಮ್ಮ ಅವರು ಸಂಜೆವಾಣಿಯೊಂದಿಗೆ ಅಳಲು ತೋಡಿಕೊಂಡರು.
ಅವರು ಪತಿ ಶಿವಮೂರ್ತಿ ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಮೂರುವರೆ ಸಾವಿರ ರೂ. ಬಾಡಿಗೆ ಕಟ್ಟುತ್ತಿರುವ ಈ ಕುಟುಂಬ ಹೊಸ ಬಾಡಿಗೆ ಮನೆಯ ಹುಡುಕಾಟದಲ್ಲಿದೆ. ಆದರೆ ೫೦ ಸಾವಿರ, ಒಂದು ಲಕ್ಷ ರೂ. ಮುಂಗಡ ಕೇಳುತ್ತಿರುವುದರಿಂದ ಅಷ್ಟು ಮೊತ್ತದ ಮುಂಗಡ ಕೊಡಲಾಗದೆ ಈ ಕುಟುಂಬ ಸಾಮಾನು-ಸರಂಜಾಮುಗಳನ್ನು ಬೀದಿಯಲ್ಲೆ ಇಟ್ಟು ಮನೆ ಹುಡುಕುವ ಕೆಲಸದಲ್ಲಿ ನಿರತವಾಗಿದೆ. ಶಿವಮೂರ್ತಿ ಅವರ ತಾಯಿ ಸೇರಿದಂತೆ ಒಟ್ಟು ೭ ಮಂದಿ ಈ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮನೆ ಮಾಲೀಕರು ಕೂಡ ಏನೂ ಮಾಡಲಾಗದೆ ಅಸಹಾಯಕತೆ ಪ್ರದರ್ಶಿಸಿದ್ದಾರೆ.
Comments are closed.