ಕರ್ನಾಟಕ

ಬೆಂಗಳೂರಿನಲ್ಲಿ ರಾಜಕಾಲುವೆಗಳ ತೆರವಿನಿಂದ ಬೀದಿಗೆ ಬಿದ್ದ ಕುಟುಂಬಗಳ ಗತಿಯೇನು..?

Pinterest LinkedIn Tumblr

raja

ಬೆಂಗಳೂರು: ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರ ಹಾಗೂ ನಗರ ಹೊರವಲಯದ ಪ್ರದೇಶಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ಕಳೆದ ಕೆಲವು ದಿನಗಳಿಂದಲೂ ಆರಂಭವಾಗಿದೆ. ಪ್ರಸ್ತುತ ಬೆಂಗಳೂರು ನಗರ ಹೊರವಲಯದ ಬೊಮ್ಮನಹಳ್ಳಿ, ಯಲಹಂಕ ಮತ್ತಿತರ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಈ ರಾಜಕಾಲುವೆಗಳು ಒತ್ತುವರಿಯಾಗಿದ್ದರಿಂದ ಭಾರೀ ಪ್ರಮಾಣದ ಮಳೆ ನೀರು ಸರಾಗವಾಗಿ ಹರಿಯದೆ ವಸತಿ ಪ್ರದೇಶಗಳಿಗೆ ನುಗ್ಗಿ ಜನರು ಎಡಗೈಯಲ್ಲಿ ಜೀವ ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದು ಅತಿರೇಕಕ್ಕೆ ಹೋದಾಗ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿತು. ಸರ್ಕಾರ ಕೂಡ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಂದು ಈ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಕೊಂಡೊಯ್ದು ಯಾವುದೇ ಮುಲಾಜಿಲ್ಲದೆ ಸುಮಾರು 32 ಕಟ್ಟಡಗಳನ್ನು ಮತ್ತಿತರ ಮನೆಗಳನ್ನು ತೆರವುಗೊಳಿಸಿತು. ಯಲಹಂಕ ಕೆಂಪೇಗೌಡ ವಾರ್ಡಿನ ಶಿವನಹಳ್ಳಿ , ಬೊಮ್ಮನಹಳ್ಳಿ, ಆವನಿ ಶೃಂಗೇರಿನಗರ ಮುಂತಾದ ಕಡೆ ಕಟ್ಟಡಗಳನ್ನು ತೆರವುಗೊಳಿಸಿ ಭಾರೀ ಪ್ರಮಾಣದ ಭೂಮಿಯನ್ನು ಮರಳಿ ವಶಕ್ಕೆ ಪಡೆದಿದ್ದಾರೆ. ಇದು ಪ್ರಸ್ತುತ ಘಟನೆ ವಿವರ.

ಹಿಂದೆ ನಡೆದದ್ದೇನು:

ಸುಮಾರು ಒಂದು ದಶಕದ ಹಿಂದೆ ಈ ಪ್ರದೇಶಗಳೆಲ್ಲ ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದವು. ಬಿಬಿಎಂಪಿಗೆ ಸೇರ್ಪಡೆಗೊಂಡಿರಲಿಲ್ಲ. ಹಾಗಾಗಿ ಬೆಂಗಳೂರು ಮಹಾನಗರಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಭೂಮಿಗಳ ದರ ತೀರ ಕಡಿಮೆಯಿತ್ತು. ಆಗ ಭೂಮಿಗೆ ಇಂದಿನ ಬೆಲೆ ಇರಲಿಲ್ಲ. ಅದರಲ್ಲೂ ನಗರ ಪ್ರದೇಶದಲ್ಲಿದ್ದ ಧಾರಣೆ ಗ್ರಾಮಾಂತರ ಪ್ರದೇಶದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ದರ ವ್ಯತ್ಯಯದ ಲಾಭ ಪಡೆದ ಅನೇಕ ಬಿಲ್ಡರ್‍ಗಳು ಈ ಭಾಗಗಳಲ್ಲಿ ಅಗ್ಗದ ಬೆಲೆಗೆ ಭೂಮಿಯನ್ನು ಖರೀದಿಸಿ ಅದರಲ್ಲಿ ಅಪಾರ್ಟ್‍ಮೆಂಟ್‍ಗಳು, ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಲಾಭಕ್ಕೆ ಮಾರಾಟ ಮಾಡಿದರು. ಕಟ್ಟಡಗಳನ್ನು ನಿರ್ಮಿಸುವಾಗ ಬಿಲ್ಡರ್‍ಗಳು ತಮ್ಮ ಶಕ್ತಿ ಮೀರಿ ರಾಜಗಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದೇ ಇಂದಿನ ಈ ಅವಾಂತರಕ್ಕೆ ಕಾರಣವಾಯಿತು ಎಂದೇ ಹೇಳಬೇಕು.

ಕೇವಲ ಬಿಲ್ಡರ್‍ಗಳಷ್ಟೇ ಅಲ್ಲ ಕೆಲವು ಪ್ರಭಾವಿಗಳು, ರಾಜಕಾರಣಿಗಳ ಬೆಂಬಲಿಗರು ಒತ್ತುವರಿಯಲ್ಲಿ ಶಾಮೀಲಾಗಿದ್ದರು. ಈ ಬಗ್ಗೆ ಈಗಾಗಲೇ ಕೆಲವರು ಕಾನೂನು ಹೋರಾಟ ನಡೆಸಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಈ ಮಧ್ಯೆ ಬೆಂಗಳೂರು ನಗರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಈ ಮನೆಗಳನ್ನು ಮಧ್ಯಮ ವರ್ಗದ ಅನೇಕ ಜನ ನಾ ಮುಂದು, ತಾ ಮುಂದು ಎಂದು ಖರೀದಿಸಿ ಇಲ್ಲಿ ನೆಲೆಸಿದರು. ಇದು ಸುಮಾರು 10 ವರ್ಷಗಳ ಹಿಂದಿನ ಮಾತು. ಇನ್ನೇನು ನಮಗೂ ಒಂದು ಗೂಡು ದೊರಕಿತು ಎಂದು ಇಲ್ಲಿನ ಜನ ನೆಮ್ಮದಿಯ ಬದುಕಿನ ಕನಸು ಕಟ್ಟಿಕೊಂಡರು. ಅದೇ ಅವರು ಮಾಡಿದ ತಪ್ಪು. ಈ ಭೂಮಿ ಯಾವಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಸೇರ್ಪಡೆಯಾಯಿತೋ ಇಲ್ಲಿಯೂ ಮಣ್ಣಿಗೆ ಬಂಗಾರದ ಬೆಲೆಯೇ ಬಂತು. ಅಲ್ಲದೆ ರಾಜಕಾಲುವೆಯನ್ನು ಯಾವುದೇ ಎಗ್ಗಿಲ್ಲದೆ ಒತ್ತವರಿ ಮಾಡಿದ್ದರಿಂದ ಮಳೆ ನೀರು ಮುಂದೆ ಹರಿದು ಹೋಗದೆ ಮನೆಗಳಿಗೆ ನುಗ್ಗಲಾರಂಭಿಸಿತು. ಆಗ ಇಲ್ಲಿನ ನಿವಾಸಿಗಳು ಬಿಬಿಎಂಪಿಯನ್ನೇ ಶಪಿಸತೊಡಗಿದರು. ಮಳೆಗಾಲದಲ್ಲಿ ನೀರು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗಿದಾಗ ಇದು ಸರ್ಕಾರದ ಗಮನಕ್ಕೆ ಬಂದು ರಾಜಕಾಲುವೆಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ಸರ್ಕಾರ ಸೂಚಿಸಿತು. ಈ ಹಿನ್ನೆಲೆಯಲ್ಲಿಯೇ ಇಂದು ಬಿಬಿಎಂಪಿ ಅಧಿಕಾರಿಗಳು ಇಲ್ಲಿನ ಒತ್ತುವರಿ ತೆರವುಗೊಳಿಸಲು ಆರಂಭಿಸಿದ್ದಾರೆ. ಆದರೆ ತಮ್ಮ ಕನಸಿನ ಸೌಧಗಳು ನೆಲಕ್ಕುರುಳುವುದನ್ನು ಕಂಡು ಇಲ್ಲಿನ ನಿವಾಸಿಗಳು ಬಿಬಿಎಂಪಿ ವಿರುದ್ದ ಸಂಘರ್ಷಕ್ಕಿಳಿದಿರುವುದು ಪ್ರಸ್ತುತ ವಿದ್ಯಮಾನ. ಈ ಜಾಗ ಗ್ರಾಮ ಠಾಣೆಯಾಗಿದ್ದಾಗ ಅಲ್ಲಿನ ಸ್ಥಳೀಯ ಆಡಳಿತದಿಂದ ಬಿಲ್ಡರ್‍ಗಳು ಕಾನೂನುಬದ್ಧವಾಗಿಯೇ ಜಮೀನು ಖರೀದಿಸಿದ್ದು , ನಂತರ ಅಲ್ಲಿ ಕಟ್ಟಡಗಳ ನಿರ್ಮಾಣ ಮಾಡಿದ್ದು ಎಲ್ಲವೂ ಸರಿಯೇ. ಆದರೆ ಅಂದು ಅವರು ತಮ್ಮ ಲಾಭ ನೋಡಿಕೊಂಡರು. ಬಿಬಿಎಂಪಿ ಕೂಡ ಕಣ್ಣು ಮುಚ್ಚಿ ಕುಳಿತು ಮನೆಗಂದಾಯ ಮತ್ತಿತರ ತೆರಿಗೆಗಳನ್ನು ಸಂಗ್ರಹಿಸತೊಡಗಿತು.

ಆದರೆ ಇವರಿಬ್ಬರ ನಡುವೆ ಸಿಕ್ಕಿದ ಬಡ ನಿವಾಸಿಗಳು ಈಗ ನಿವಾಸವೂ ಇಲ್ಲ ನೆಮ್ಮದಿಯ ಬದುಕು ಇಲ್ಲ, ಇದ್ದ ಸೂರು ಕೂಡ ಕುಸಿದುಬಿದ್ದು ನಿರ್ಗತಿಕರಾಗಿ ಬೀದಿಗೆ ಬಿದ್ದಿರುವುದಂತೂ ಸತ್ಯ. ಇದು ಸರ್ಕಾರದ ತಪ್ಪೇ? ಹಿಂದೆ ಗ್ರಾಮ ಠಾಣೆ ಅನುಮತಿಯೊಂದಿಗೆ ಕಟ್ಟಡ ನಿರ್ಮಿಸಿದ್ದ ಬಿಲ್ಡರ್‍ಗಳ ತಪ್ಪೇ? ಅಲ್ಲಿ ಮನೆಗಳನ್ನು ಖರೀದಿಸಿ ವಾಸ್ತವ್ಯ ಹೂಡಿದ್ದ ಪಾಪಿ ಜನರ ತಪ್ಪೇ… ಈ ಪ್ರಶ್ನೆಗಳಿಗೆ ಈಗ ಉತ್ತರಿಸುವವರು ಯಾರು?.

ಬಿಬಿಎಂಪಿ ಈ ಭೂಮಿಗಳು ತನ್ನ ತೆಕ್ಕೆಗೆ ಬಂದಾಗಲೇ ಎಚ್ಚರಿಕೆ ವಹಿಸಿದ್ದರೆ ಬಹುಶಃ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೇನೋ. ಒಟ್ಟಾರೆ ಈಗ ಬೀದಿ ಪಾಲಾಗಿರುವ ನೂರಾರು ಜನರಿಗೆ ಆಸರೆ ನೀಡಿ ಸಂತೈಸುವ ಹೊಣೆ ಯಾರದ್ದು.

Comments are closed.