ಬೆಂಗಳೂರು, ಆ. ೨- ಸತತ ನಾಲ್ಕು ದಿನಗಳಿಂದ ಬಿದ್ದ ಮಳೆಯಿಂದಾಗಿ ಚುಂಚಕಟ್ಟೆ ಕೆರೆ, ಗಣಪತಿ ಕೆರೆ (ಕೋಣನಕುಂಟೆ ಕೆರೆ) ಗಳು ತುಂಬಿ ಹರಿದ ಪರಿಣಾಮವಾಗಿ ಕೆರೆಗಳ ಸಮೀಪದ ಶಾರದ ನಗರ, ಅಶ್ವತ್ಥ ನಾರಾಯಣ ಬಡಾವಣೆ, ಜರಗನ ಹಳ್ಳಿ ಬಡಾವಣೆಗಳು ಜಲಾವೃತಗೊಂಡು ಅಕ್ಷರಷಃ ಕೆರೆಗಳಂತಾಗಿದ್ದು, ಬಡಾವಣೆಗಳ ನಿವಾಸಿಗಳು ಹೆಚ್ಚು-ಕಡಿಮೆ `ನರಕವಾಸ’ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಎರಡೂ ಕೆರೆಗಳು ಮಳೆ ನೀರಿನಿಂದ ತುಂಬಿದ್ದರಿಂದ ಹೆಚ್ಚುವರಿ ನೀರು ಆಸುಪಾಸಿನ ಬಡಾವಣೆಗಳಿಗೆ ಹರಿದಿದ್ದು, ಸುಮಾರು 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಕಳೆದ ಒಂದೆರಡು ದಿನಗಳಿಂದ ನೀರಿನ ಹರಿವು ಕಡಿಮೆಯಾಗಿದ್ದರೂ, ಇನ್ನೂ ಕೂಡ ರಸ್ತೆಗಳಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ತುಂಬಿದ್ದು, ನಿವಾಸಿಗಳು ಹೊರಬರಲಾಗದೆ, ಪರದಾಡುವ ಪರಿಸ್ಥಿತಿ ಎದುರಾಗಿದೆ.
ಪುಟ್ಟೇನಹಳ್ಳಿ ಕೆರೆ, ಸಾರಕ್ಕಿ ಕೆರೆಗಳಲ್ಲಿ ಹೂಳು ತೆಗೆಯದೇ ಇರುವುದು, ಈ ಸ್ಥಳದಲ್ಲಿ ಹಾದುಹೋಗುವ ರಾಜಕಾಲುವೆ ಒತ್ತುವರಿಯಾಗಿರುವುದರಿಂದ ಕೆರೆಗಳ ನೀರು ಮುಂದೆ ಹರಿದುಹೋಗದೆ, ಮನೆಗಳು ಮತ್ತು ರಸ್ತೆಗಳಲ್ಲೇ ನಿಲ್ಲುವಂತಾಗಿದೆ. 2006 ರಲ್ಲಿ, ಕಳೆದ ಆರು ತಿಂಗಳ ಹಿಂದೆ ಮಳೆ ಬಂದಾಗ ಇಂತಹ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರಲಿಲ್ಲ. ಆದರೆ ಕಳೆದ ಐದು ದಿನಗಳ ಹಿಂದೆ ಸತತವಾಗಿ ಸುರಿದ ಮಳೆ ಈ ಬಡಾವಣೆಗಳಲ್ಲಿ ನೀರು ನಿಂತು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪುಟ್ಟೇನಹಳ್ಳಿಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದು ಇಂದಿನ ಕೆಟ್ಟ ಪರಿಸ್ಥಿತಿಗೆ ಕಾರಣವಾಗಿದೆ. ಕಳೆದ ಮೂರು ದಿನಗಳ ಹಿಂದೆ ಎದೆಮಟ್ಟದವರೆಗೂ ನೀರು ನಿಂತಿದ್ದು, ಇಲ್ಲಿನ ನಿವಾಸಿಗಳು ಹೊರಹೋಗದೆ ಕಾಲಕಳೆದಿದ್ದಾರೆ.
ಒಳಚರಂಡಿ ವ್ಯವಸ್ಥೆಯೂ ಇಲ್ಲಿ ಸರಿಯಿಲ್ಲದ ಕಾರಣ ಮಳೆಯ ನೀರಿನ ಜೊತೆಗೆ ಚರಂಡಿಯ ನೀರು ನೇರವಾಗಿ ಮನೆಯೊಳಗೆ ನುಗ್ಗಿದ್ದು, ಕೆಟ್ಟವಾಸನೆಯನ್ನು ಕುಡಿಯುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಮನೆಯೊಳಗಿದ್ದವರು ಹೊರಗೆ ಬರುವಂತಿಲ್ಲ. ಹೊರಗೆ ಇದ್ದವರು ಮನೆಗೆ ಬರುವಂತಿಲ್ಲ. ಅಂತಹ ಪರಿಸ್ಥಿತಿ ಜರಗನಹಳ್ಳಿ, ಶಾರದ ನಗರ, ಅಶ್ವತ್ಥ ನಾರಾಯಣ ಬಡಾವಣೆಗಳ ಜನರಿಗೆ ಎದುರಾಗಿದೆ. ಅಶ್ವತ್ಥ ನಾರಾಯಣ ಬಡಾವಣೆಯಲ್ಲೇ ಇರುವ ಪ್ರಸನ್ನ ಜ್ಯೋತಿ ಅನಾಥಾಶ್ರಮಕ್ಕೂ ನೀರು ನುಗ್ಗಿದ್ದು, ಅಲ್ಲಿದ್ದ 25 ಮಕ್ಕಳನ್ನು ಸುರಕ್ಷಿತವಾದ ಸ್ಥಳಕ್ಕೆ ತೆರವುಗೊಳಿಸಲಾಗಿದೆ.
ಚುಂಚಕಟ್ಟೆ, ಗಣಪತಿ ಪುರ ಕೆರೆ ಹೆಚ್ಚುವರಿ ನೀರು ಇಲ್ಲಿಗೆ ನುಗ್ಗಿರುವುದರಿಂದ ಕೆರೆಯೊಳಗಿನ ಹಾವುಗಳು, ಬಡಾವಣೆಯಲ್ಲಿ ಹರಿದಾಟಲಾರಂಭಿಸಿವೆ. ಮನೆಯೊಳಗೆ ಹಾವುಗಳನ್ನು ಹಿಡಿಯಲು ಇಲ್ಲಿನ ನಿವಾಸಿಗಳು 1200 ರೂ. ನಿಂದ 2 ಸಾವಿರ ರೂ. ಗಳನ್ನು ನೀಡಿದ್ದಾರೆ.
ಅಶ್ವತ್ಥ ನಾರಾಯಣ ಬಡಾವಣೆಯ ಮೂರು ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗದ ಹೊರತು, ನೀರು ಹರಿದುಹೋಗುವಂತಿಲ್ಲ. ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆಯನ್ನು ಪತ್ತೆ ಮಾಡಲಾರಂಭಿಸಿದ್ದಾರೆ.
Comments are closed.