ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ನಗರ ಅಕ್ಷರಶ ತತ್ತರಿಸಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ಕೆರೆಗಳು ಕೋಡಿ ಹರಿದು ಪ್ರಮುಖ ರಸ್ತೆಗಳು ಜಲಾವೃತಗೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಂಗಳೂರಿನ ಬಿಟಿಎಂ ಲೇಔಟ್ ಬಳಿ ಮಡಿವಾಳ ಕೆರೆ ಕೋಡಿ ಹರಿದು ರಸ್ತೆಗೆ ನೀರು ನುಗ್ಗಿದೆ. ರಭಸವಾಗಿ ನೀರು ಹರಿಯುತ್ತಿರುವುದರಿಂದ ಕೆರೆಯಲ್ಲಿದ್ದ ಮೀನುಗಳು ರಸ್ತೆಗೆ ಬಂದಿದ್ದರಿಂದ ಸಾರ್ವಜನಿಕರು ಮನೆಗಳಿಂದ ಸೊಳ್ಳೆ ಪರದೆ ತಂದು ಮೀನು ಹಿಡಿಯುವಲ್ಲಿ ಸಕ್ರಿಯರಾಗಿದ್ದರು. ಇದರಿಂದಾಗಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಕೂಡಲೇ ಪೊಲೀಸರು ಸಾರ್ವಜನಿಕರನ್ನು ಚದುರಿಸಿ ವಾಹನಕ್ಕೆ ಸಂಚಾರ ಮುಕ್ತ ಮಾಡಿದರು.
ಕೆಲ ಕೆರೆಗಳು ಕೋಡಿ ಹರಿದಿದ್ದರಿಂದ ಮನೆಗಳಿಗೂ ಸಂಪೂರ್ಣ ನೀರು ನುಗ್ಗಿದೆ. ಸುಮಾರು 4 ರಿಂದ 5 ಅಡಿಗಳಷ್ಟು ನೀರು ನುಗಿದ್ದು ಕುಡಿಯುವ ನೀರು, ಆಹಾರ ವಿಲ್ಲದೆ ಗ್ರಾಮಸ್ಥರು ಪರದಾಡುವಂತಾಯಿತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಬೋಟಿನ ಮೂಲಕ ಮನೆ ಮನೆಗೆ ನೀರು ಆಹಾರದ ಪೊಟ್ಟಣಗಳು ನೀಡಿದರು.
ಬೆಂಗಳೂರಿನ ಕೆಂಗೇರಿ, ಬಾಪೂಜಿನಗರ, ಬಿಳೇಕಹಳ್ಳಿ, ಶಿವಾಜಿನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮೈಸೂರು ರಸ್ತೆಯಿಂದ ಸಿಟಿ ಮಾರುಕಟ್ಟೆ ಸಂಪರ್ಕಿಸುವ ಶ್ರೀ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ಸೇರಿದಂತೆ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ 2 ರಿಂದ 3 ಅಡಿಗಳಷ್ಟು ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಇನ್ನು ನಾಯಂಡಹಳ್ಳಿ ಸಮೀಪ ರಸ್ತೆ ಮಧ್ಯೆ ನೀರಿನಲ್ಲಿ ಕಾರೊಂದು ಕೆಟ್ಟು ನಿಂತ ಪರಿಣಾಮ ಬೆಳ್ಳಂಬೆಳಗ್ಗೆಯೇ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಮಳೆ ನಡುವೆಯೇ ವಾಹನ ಸವಾರರು ಪರದಾಡುವಂತಾಗಿತ್ತು.
ಬಾಪೂಜಿನಗರ ಸಮೀಪವಿರುವ ವೃಷಭಾವತಿ ರಾಜಾಕಾಲುವೆ ತುಂಬಿ ಹರಿಯುತ್ತಿದ್ದು, ಸಮೀಪ ಕೊಳಗೇರಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯೂ ರಾಜಾಕಾಲುವೆ ತುಂಬಿ ಹರಿಯುತ್ತಿದೆ.
ಕೋಡಿ ಚಿಕ್ಕನಹಳ್ಳಿ ಕೆರೆ ಭರ್ತಿ; 10ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳಿಗೆ ನುಗ್ಗಿದ ನೀರು
ಇನ್ನು ಬೆಂಗಳೂರು ಹೊರವಲಯದ ಬಿಳೇಕಹಳ್ಳಿ ಸಮೀಪದ ಕೋಡಿ ಚಿಕ್ಕನಹಳ್ಳಿ ಕೆರೆ ಭರ್ತಿಯಾಗಿ ಉಕ್ಕಿಹರಿದ ಪರಿಣಾಮ ಸಮೀಪದ ಸುಮಾರು 10ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದೆ. ವಸತಿ ಸಂಕೀರ್ಣಗಳ ಬೇಸ್ ಮೆಂಟ್ ನಲ್ಲಿ ಸುಮಾರು 3 ರಿಂದ 4 ಅಡಿಗಳಷ್ಟು ನೀರು ನುಗ್ಗಿದೆ. ಹೀಗಾಗಿ ಬೆಳಗ್ಗೆ ಸ್ಥಳೀಯ ನಿವಾಸಿಗಳು ನೀರಿನ ನಡುವೆಯೇ ತಮ್ಮ ನಿತ್ಯ ಕಾರ್ಯಗಳನ್ನು ಮಾಡುವಂತಾಗಿತ್ತು.
ಮತ್ತೆ ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ನೀರಿನ ಮಧ್ಯೆ ಸಿಲುಕಿದ್ದ ಮಂದಿ ಹೊರಬರಲಾಗದೇ ಪರಿತಪಿಸುತ್ತಿದ್ದ ಪ್ರಸಂಗಗಳೂ ನಡೆದಿವೆ. ಹೀಗಾಗಿ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ನೀರಿನ ಮಧ್ಯೆ ಸಿಲುಕಿದ್ದ ಮಂದಿಯನ್ನು ಯಾಂತ್ರಿಕ ಬೋಟ್ ಗಳ ನೆರವಿನಿಂದ ರಕ್ಷಿಸಿದ್ದಾರೆ.
Comments are closed.