ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಭಿನ್ನ ಆಲೋಚನೆಯೊಂದಿಗೆ ಯುವ ಪ್ರತಿಭೆಗಳು ಬರ್ತಾನೇ ಇದಾರೆ. ಆ ನಿಟ್ಟಿನಲ್ಲಿ ಇಲ್ಲೊಂದು ತಂಡ ಕರಾಟೆ ಕಿಂಗ್ ಶಂಕರ್‍ನಾಗ್ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ.
2014ರಲ್ಲಿ ಟೆಕ್ಕಿಗಳ ಯುವಕರ ತಂಡವೊಂದು ಶಂಕರ್‍ನಾಗ್ ಟೀಂ ಕಟ್ಟಿಕೊಂಡು ಕೌರ್ಯ ಎನ್ನುವ ಸಿನಿಮಾ ಸಿದ್ದಪಡಿಸಲು ತಯಾರಿ ಮಾಡಿಕೊಂಡಿತ್ತು. ಬಹುತೇಕ ಚಿತ್ರೀಕರಣ ಮುಗಿಸಿದ್ದು, ನಿರ್ಮಾಪಕರು ಸದ್ಯ ಬ್ಯುಸಿ ಇರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಮರುಚಾಲನೆ ಸಿಗಲಿದೆ. ಒಳಿತು ಮಾಡೋ ಮನುಜ ಎನ್ನುವ ಹಾಗೆ ತಂಡವು ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಅದಮ್ಯ ಬಯಕೆಯಿಂದ ಟೀಂನ್ನು ಮೆಮೋರಿಯಲ್ ಟ್ರಸ್ಟ್ ಅಂತ ಬದಲಾಯಿಸಿಕೊಂಡಿದೆ. ಇದರಲ್ಲಿ ಮೊದಲ ಹಂತವಾಗಿ ಅತ್ಯತ್ತಮ ಕಿರುಚಿತ್ರ, ಮ್ಯೂಸಿಕ್ ಆಲ್ಬಂ ಮತ್ತು ಸಾಧಕರಿಗೆ ಪ್ರಶಸ್ತಿ ನೀಡಲು ತೀರ್ಮಾನ ಹಾಕಿಕೊಂಡಿದ್ದಾರೆ.
ಹಿಟ್ ಚಿತ್ರಗಳಾದ ಕಿರುಗೂರಿನ ಗಯ್ಯಾಳಿಗಳು ನಿರ್ದೇಶಕಿ ಸುಮನಾ ಕಿತ್ತೂರು, ಫಸ್ಟ್‍ರ್ಯಾಂಕ್‍ರಾಜು ನಿರ್ದೇಶಕ ನರೇಶ್‍ಕುಮಾರ್, ಗೋಧಿ ಬಣ್ಣ ಸಾಧರಣ ಮೈಕಟ್ಟು ನಿರ್ದೇಶಕ ಹೇಮಂತ್‍ರಾವ್, ರಿಕ್ಕಿ ನಿರ್ದೇಶಕ ರಿಶಬ್‍ಶೆಟ್ಟಿ ಹಾಗೂ ಬರಲಿರುವ ಬಬ್ಲೂಷ ಸಿನಿಮಾ ನಿರ್ದೇಶಕ ವೆಂಕಟ್ ಭರದ್ವಾಜ್ ಇವರುಗಳು ಪ್ರಶಸ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮ್ಯಾಕ್ರೋ ಮೂವೀಯ ಪ್ರಾರಂಭ ಮತ್ತು ಕೊನೆಯ ಟೈಟಲ್ ವರೆಗೆ ಸೇರಿಕೊಂಡು 15-20 ನಿಮಿಷ, ಮೈಕ್ರೋ ಮೂವೀಯ 3-5 ನಿಮಿಷ ಹಾಗೂ ಮ್ಯೂಸಿಕ್ ಆಲ್ಬಂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಕನ್ನಡ, ಕೊಡವ, ತುಳು, ಕೊಂಕಣಿ,ಲಂಬಾಣಿ ಭಾಷೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಕೊನೆ ದಿನಾಂಕ ಅಕ್ಟೋಬರ್ 1. ಕರಾಟೆ ಕಿಂಗ್ ಜನ್ಮ ದಿನದಂದು ಪ್ರಶಸ್ತಿಯನ್ನು ಪ್ರಧಾನ ಮಾಡಲು ತಂಡದ ಅಧ್ಯಕ್ಷ ಅನಿಲ್‍ಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗೆ www.teamshankarnag.com ವೆಬ್‍ಸೈಟನ್ನು ವೀಕ್ಷಿಸಬಹುದು. ಪ್ರಶಸ್ತಿ ಮಾದರಿ ಫಲಕಗಳನ್ನು ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಮ್ಮ ಮಾತಿನಲ್ಲಿ ಹೇಳಿಕೊಳ್ಳುತ್ತಾ ಚಂದನವನದಲ್ಲಿ ಇಬ್ಬರು ಕನಸುಗಾರರು. ಶಂಕರ್‍ನಾಗ್, ರವಿಚಂದ್ರನ್. ಇವರಿಬ್ಬರು ಕನ್ನಡದ ಎರಡು ಕಣ್ಣುಗಳು ಇದ್ದಹಾಗೆ. ಅವರುಗಳ ಕನಸುಗಳು, ಆಲೋಚನೆ ಯಾರಿಗೂ ಬರುವುದಿಲ್ಲ. ಇಂದು ತಂತ್ರಜ್ಞರು, ಕಲಾವಿದರು ಬ್ಯುಸಿ ಇದ್ದಾರೆ ಎನ್ನುವುದಕ್ಕೆ ಮುಖ್ಯ ಕಾರಣ ಶಂಕರ್‍ನಾಗ್ ಎಂದರೆ ತಪ್ಪಾಗಲಾರದು. ಅವರಂತೆ ಕಿಚ್ಚು ಯುವಕರಿಗೆ ಇದೆ. ವಾಣಿಜ್ಯ ಮಂಡಳಿಯಿಂದ ಸಲಹೆ, ಸಹಕಾರ ನೀಡಲು ಸಿದ್ದರಿದ್ದೇವೆ ಅಂತ ತಂಡಕ್ಕೆ ಶುಭ ಹಾರೈಸಿದರು.
Comments are closed.