ಬೆಂಗಳೂರು, ಜು. ೨೬ – ವೇತನ ಏರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಎರಡನೇ ದಿನವೂ ಮುಂದುವರೆಸಿದ್ದರಿಂದ ಪ್ರಯಾಣಿಕರು ಸಂಚಾರ ಸೌಲಭ್ಯವಿಲ್ಲದೆ ಪರಿತಪಿಸುವಂತಾಯಿತು. ಬಸ್‌ಗಳಿಲ್ಲದೆ ಜನರ ಗೋಳು ಹೇಳತೀರದಂತಾಗಿತ್ತು. ಪರ್ಯಾಯ ವ್ಯವಸ್ಥೆ ಮಾಡಲಾಗುವುದೆಂದು ಸರ್ಕಾರ ಹೇಳಿದ್ದ ಭರವಸೆ ಕೇವಲ ಭರವಸೆಯಾಗೇ ಉಳಿಯಿತು.
ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ರಸ್ತೆಗಿಳಿಯದೆ ನಿಂತಲ್ಲೇ ನಿಂತಿದ್ದವು. ನಿನ್ನೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿದ್ದರೂ ಇಂದು ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಸಾರಿಗೆ ನೌಕರರ ವಿರುದ್ಧ `ಎಸ್ಮಾ’ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪುನರುಚ್ಚರಿಸಿದ್ದಾರೆ. ಆದರೆ, ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಯಾಣಿಕರ ಪರದಾಟ ತಪ್ಪಿಸಲು `ಎಸ್ಮಾ’ ಜಾರಿಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣ ಮಾಡಿದ್ದರಿಂದ ರೈಲು ಭೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಿ ತುಳುಕುತ್ತಿದ್ದುದು ಕಂಡುಬಂತು. ನೀ ಕೊಡೆ ನಾ ಬಿಡೆ ಎಂಬಂತೆ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವೆ ನಡೆದಿರುವ ಹಗ್ಗ ಜಗ್ಗಾಟದಿಂದ ಸಾರ್ವಜನಿಕರೂ ಹೈರಾಣಾಗಿದ್ದಾರೆ.
ಸಂಚಾರ ಸಂಪೂರ್ಣ ಬಂದ್
ಮುಷ್ಕರದ 2ನೇ ದಿನವಾದ ಇಂದೂ ರಾಜ್ಯದಾದ್ಯಂತ ಬಸ್‌ಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಪರ ಊರುಗಳಿಗೆ ಹೋಗುವ ಪ್ರಯಾಣಿಕರ ಗೋಳು ಕೇಳುವಂತಿಲ್ಲ. ಶೇ. 35 ರಷ್ಟು ವೇತನ ಏರಿಕೆಗೆ ಆಗ್ರಹಿಸಿ ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದು, ಮುಷ್ಕರ ಯಶಸ್ವಿಯಾಗಿ ನಡೆದಿದೆ. 4 ಸಾರಿಗೆ ನಿಗಮದ ಬಸ್‌ಗಳ ಓಡಾಟ ಸಂಪೂರ್ಣ ಬಂದ್ ಆಗಿದೆ.
ಸಾರಿಗೆ ನೌಕರರ ಮುಷ್ಕರದ ಬಿಸಿ ಸಾರ್ವಜನಿಕರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ತಟ್ಟಿದ್ದು, ಸಾರಿಗೆ ಸೌಕರ್ಯವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮುಷ್ಕರ ನಿಲ್ಲಿಸುವವರೆಗೂ ಮಾತುಕತೆ ಇಲ್ಲ ಎಂಬ ನಿಲುವಿಗೆ ಸರ್ಕಾರ ಅಂಟಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಸಾರಿಗೆ ನೌಕರರು ವೇತನ ಏರಿಸುವವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬ ಧೋರಣೆ ತಾಳಿದ್ದು, ಸರ್ಕಾರ ಹಾಗೂ ಸಾರಿಗೆ ನೌಕರರ ಈ ಬಿಗಿ ನಿಲುವುಗಳಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದ. ಕ., ಉಡುಪಿಗಳಲ್ಲೂ ಇಲ್ಲ
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಶಾಲಾ – ಕಾಲೇಜಿಗೆ ಎರಡನೇ ದಿನವೂ ರಜೆ ಘೋಷಿಸಲಾಗಿದೆ.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಷ್ಕರದ ಕಾರಣ ಮುಂದೂಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಿರುವುದರಿಂದ ಈ ಜಿಲ್ಲೆಗಳಲ್ಲಿ ಮುಷ್ಕರದ ಬಿಸಿ ಅಷ್ಟೇನೂ ತಟ್ಟಿಲ್ಲ. ಆದರೆ, ಈ ಜಿಲ್ಲೆಗಳಲ್ಲೂ ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟ ಸಂಪೂರ್ಣ ಸ್ತಬ್ಧಗೊಂಡಿದೆ.
ಸಾರಿಗೆ ನೌಕರರ ಮುಷ್ಕರದಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ವ್ಯಾಪಾರ ವಹಿವಾಟುಗಳಿಗೂ ತೊಂದರೆಯಾಗಿದೆ.
ಪ್ರತಿ ದಿನ 20 ಕೋಟಿ ನಷ್ಟ
ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ಸುಮಾರು 20 ಕೋಟಿ ರೂ. ಪ್ರತಿ ದಿನ ನಷ್ಟವಾಗುತ್ತಿದೆ.
ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವುರಿಂದ ಇಂದೂ ಸಹ ಪ್ರಮುಖ ಬಸ್ ನಿಲ್ದಾಣ, ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬಸ್ ಡಿಪೋಗಳ ಭದ್ರತೆಗೂ ಪೊಲೀಸರನ್ನು ನಿಯೋಜಿಸಲಾಗಿದೆ.
ಖಾಸಗಿಯವರಿಗೆ ಸುಗ್ಗಿ
ಸಾರಿಗೆ ನೌಕರರ ಮುಷ್ಕರದ ಲಾಭವನ್ನು ಖಾಸಗಿ ವಾಹನಗಳ ಮಾಲೀಕರು ಪಡೆದಿದ್ದು, ಪ್ರಯಾಣಿಕರಿಂದ ಎರಡನೇ ದಿನವೂ ದುಪ್ಪಟ್ಟು ವಸೂಲಿ ಮುಂದುವರೆದಿದೆ. ಅನಿವಾರ್ಯವಾಗಿ ತುರ್ತು ಕಾರ್ಯಗಳಿಗೆ ತೆರಳುವ ಜನ ಹೆಚ್ಚಿನ ದರ ಕೊಟ್ಟು ಶಾಪ ಹಾಕುತ್ತ ಪ್ರಯಾಣಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲೂ ಮುಷ್ಕರದ ಬಿಸಿ ಸಾರ್ವಜನಿಕರಿಗೆ ತಟ್ಟಿದ್ದು, ನಗರ ಸಾರಿಗೆಯ ಬಸ್‌ಗಳಿಲ್ಲದೆ ಜನ ತೊಂದರೆಗೆ ಸಿಲುಕಿದ್ದಾರೆ. ಸಿಕ್ಕ ಸಿಕ್ಕ ಖಾಸಗಿ ವಾಹನಗಳನ್ನು ಹತ್ತಿಕೊಂಡು ಕಚೇರಿಗಳಿಗೆ ತೆರಳುತ್ತಿದ್ದು, ಮೆಟ್ರೋ ರೈಲು ಸಂಚರಿಸುವ ಕಡೆ ಸಾರ್ವಜನಿಕರಿಗೆ ಅಷ್ಟೇನೂ ತೊಂದರೆಯಾಗದಿದ್ದರೂ ಮೆಟ್ರೋ ರೈಲಿನ ರಶ್ ಕಂಡೆಸಿರುವುದಂತೂ ನಿಜ. ಮುಷ್ಕರ ಬೇಗ ನಿಂತರೆ ಸಾಕು ಎಂಬ ಮನಸ್ಥಿತಿ ಸಾರ್ವಜನಿಕರದ್ದಾಗಿದೆ.
Comments are closed.