ಕರ್ನಾಟಕ

ಗಣಪತಿ ತನಿಖೆಗೆ ವಿಘ್ನ : ಆತ್ಮಹತ್ಯೆ ಪ್ರಕರಣ -ಪೊಲೀಸರಿಗೆ ಕಗ್ಗಂಟು

Pinterest LinkedIn Tumblr

Ganapati-DYSPclrಬೆಂಗಳೂರು,ಜು.೨೧-ಮಂಗಳೂರು ಐಜಿ ಕಚೇರಿ ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಯಾರು ನಡೆಸಬೇಕೆನ್ನುವುದರ ಕುರಿತು ಕೇಂದ್ರ ಅಪರಾಧ ವಿಭಾಗ(ಸಿಐಡಿ)ಹಾಗೂ ಮಡಿಕೇರಿ ನಗರ ಪೊಲೀಸರ ನಡುವೆ ಗೊಂದಲ ಉಂಟಾಗಿದೆ.

ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಐಪಿಸಿ ಸೆಕ್ಷನ್ ೧೭೪(ಅಸಹಜಸಾವು)ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು ಆದರೆ ಮಡಿಕೇರಿ ಕೋರ್ಟ್ ಆದೇಶದ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೦೬ರಡಿ ಆತ್ಮಹತ್ಯಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.

ಇವೆರಡು ಪ್ರಕರಣಗಳನ್ನು ಮಡಿಕೇರಿ ನಗರ ಪೊಲೀಸರೇ ತನಿಖೆ ನಡೆಸಬೇಕೆ ಇಲ್ಲವೇ ಸಿಐಡಿ ಅಧಿಕಾರಿಗಳು ತನಿಖೆ ನಡೆಸಬೇಕೆ ಎನ್ನುವ ಗೊಂದಲ ಉಂಟಾಗಿದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರು ಈ ಕುರಿತು ತೀರ್ಮಾನ ಕೈಗೊಳ್ಳಬೇಕಾಗಿದೆ.

ಐಪಿಸಿ ಸೆಕ್ಷನ್ ೧೭೪ ಹಾಗೂ ೩೦೬ ಎರಡು ಪ್ರಕರಣಗಳನ್ನು ಸೇರಿಸಿ ಯಾರು ತನಿಖೆ ಕೈಗೊಳ್ಳಬೇಕೆಂಬ ಆದೇಶವನ್ನು ಡಿಜಿಪಿ ಓಂಪ್ರಕಾಶ್ ಅವರು ನೀಡಬೇಕಾಗಿದ್ದು ಅವರ ಆದೇಶದ ಮೇಲೆ ತನಿಖೆ ಮುಂದುವರೆಯಲಿದೆ.

ತನಿಖೆಯನ್ನು ಯಾರು ನಡೆಸಬೇಕೆನ್ನುವ ಗೊಂದಲದ ಹಿನ್ನಲೆಯಲ್ಲಿ ಸಿಐಡಿಯ ಪೊಲೀಸ್ ಮಹಾನಿರೀಕ್ಷಕ(ಐಜಿಪಿ)ಹೇಮಂತ್ ನಿಂಬಾಳ್ಕರ್ ಅವರು ಡಿಜಿಪಿ ಓಂಪ್ರಕಾಶ್ ಅವರನ್ನು ಭೇಟಿಯಾಗಿ ಗಣಪತಿ ಆತ್ಮಹತ್ಯೆಯು ಪ್ರಕರಣದಲ್ಲಿ ತನಿಖೆಯ ಇಲ್ಲಿಯವರೆಗಿನ ಮಾಹಿತಿ ನೀಡಿ ತನಿಖೆಯನ್ನು ಮುಂದುವರೆಸುವ ಕುರಿತು ಸುಧೀರ್ಘಚರ್ಚೆ ನಡೆಸಿದ್ದಾರೆ.
ನಿಂಬಾಳ್ಕರ್ ಹಾಗು ಮೈಸೂರು ವಲಯ ಐಜಿಪಿ ಬಿ.ಕೆ.ಸಿಂಗ್ ಮಡಿಕೇರಿ ಎಸ್‌ಪಿ ರಾಜೇಂದ್ರಪ್ರಸಾದ್ ಅವರ ಜೊತೆ ಚರ್ಚಿಸಿರುವ ಓಂಪ್ರಕಾಶ್ ಅವರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಂತಿಮ ಆದೇಶ ಮಾಡಲಿದ್ದಾರೆ
ಈ ನಡುವೆ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಸ್ಥಗಿತಗೊಳಿಸಿ ಇಲ್ಲಿಯವರೆಗಿನ ತನಿಖಾ ಮಾಹಿತಿಯನ್ನು ಮಡಿಕೇರಿ ನಗರ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್‌ನಲ್ಲಿ ಇಂದು ಇಬ್ಬರು ಐಪಿಎಸ್ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯೂ ವಿಚಾರಣೆಗೆ ಬರಲಿದೆ.ಕೋರ್ಟ್ ಆದೇಶ ನೋಡಿಕೊಂಡು ತನಿಖೆ ಯಾರು ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯು ಪ್ರಗತಿಯಲ್ಲದೆ ಇಲ್ಲಿಯವರೆಗಿನ ತನಿಖೆಯ ವಿವರವನ್ನು ಡಿಜಿಪಿ ಓಂಪ್ರಕಾಶ್ ಅವರಿಗೆ ನೀಡಲಾಗಿದೆ ಮಡಿಕೇರಿ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ತನಿಖೆಯನ್ನು ಮುಂದುವರೆಸುವ ಗೊಂದಲವಿದ್ದು ಅದನ್ನು ಓಂಪ್ರಕಾಶ್ ಅವರ ಗಮನಕ್ಕೆ ತರಲಾಗಿದ್ದು ಅವರ ಆದೇಶ ಆಧಾರದ ಮೇಲೆ ತನಿಖೆ ಮುಂದುವರೆಸುವ ಇಲ್ಲವೇ ಸ್ಥಗಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಜಿಪಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

Comments are closed.