ಬೆಂಗಳೂರು, ಜು. ೨೧- ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕಾಗಿ ರೂಪಿಸಿರುವ ಗ್ರಾಮ ಸ್ವರಾಜ್-2 ರ ಯೋಜನೆಯಡಿ ರಾಜ್ಯಕ್ಕೆ 2 ಸಾವಿರ ಕೋಟಿ ರೂ. ಗಳ ವಿಶ್ವಬ್ಯಾಂಕ್ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಇಂದಿಲ್ಲಿ ತಿಳಿಸಿದರು.
ಈ ಪೈಕಿ ಕೇಂದ್ರ ಸರ್ಕಾರ 1400 ಕೋಟಿ ರೂ. ನೆರವು ನೀಡಿದರೆ ರಾಜ್ಯ ಸರ್ಕಾರ ತನ್ನ ಪಾಲಿನ 600 ಕೋಟಿ ಹಣ ಹೊಂದಿಸಬೇಕಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ಈ ಯೋಜನೆಯಡಿ ಗ್ರಾಮ ಪಂಚಾಯ್ತಿಗಳ ಸಾಮರ್ಥ್ಯ ಹೆಚ್ಚಳ, ಮೂಲ ಸೌಕರ್ಯಗಳ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
2791 ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕೆ ವಿಶ್ವ ಬ್ಯಾಂಕ್ ನೆರವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಬಾಪೂಜಿ ಸೇವಾ ಕೇಂದ್ರ
ಗ್ರಾಮೀಣ ಮಟ್ಟದಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯ್ತಿಗಳಲ್ಲಿ 2 ಸಾವಿರ ಬಾಪೂಜಿ ಸೇವಾ ಕೇಂದ್ರಗಳ ಆರಂಭಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಆಗಸ್ಟ್ 14ರ ವೇಳೆಗೆ ಇನ್ನೂ 2 ಸಾವಿರ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ಒನ್ ಮಾದರಿಯಲ್ಲಿ 100 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಈ ಕೇಂದ್ರಗಳು ಸಹಕಾರಿಯಾಗಲಿವೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.
ಕೇಂದ್ರ ಸರ್ಕಾರ ಈ ಯೋಜನೆಗೆ ಹೆಚ್ಚಿನ ತಾಂತ್ರಿಕ ನೆರವು ನೀಡಿದಲ್ಲಿ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ಇಂತಹ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
Comments are closed.