ಕರ್ನಾಟಕ

13 ಸಾವಿರ ಅತಿಥಿ ಶಿಕ್ಷಕರ ನೇಮಕ

Pinterest LinkedIn Tumblr

Teacher-Clipart-in-Color-ಬೆಂಗಳೂರು, ಜು. ೨೧- ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಈ ಕೊರತೆಯನ್ನು ನೀಗಿಸುವ ಸಲುವಾಗಿ ಈ ವರ್ಷ 13,306 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ಅವರು ಇಂದಿಲ್ಲಿ ತಿಳಿಸಿದರು.

22 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಯಾವ ರೀತಿ ನೇಮಕ ಮಾಡಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುತ್ತಿದ್ದಾರೆ. 45 ಲಕ್ಷ ಸರ್ಕಾರಿ ಶಾಲೆಗಳಲ್ಲಿವೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಬೆಳಗಾವಿ ಸೇರಿದಂತೆ ಮೂರು ವಿಭಾಗಗಳಲ್ಲಿ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಈ ಮೂರು ವಿಭಾಗಗಳಿಗೆ ಹ್ಯಾಂಡ್‌ಲೂಮ್ ಕಾರ್ಪೋರೇಷನ್‌ಗಳಿಂದ ಖರೀದಿಸಲಾಗಿದೆ. ಮೈಸೂರು ವಿಭಾಗಕ್ಕೆ ಖಾಸಗಿಯವರಿಂದ ಟೆಂಡರ್ ಮೂಲಕ ತರಿಸಲಾಗಿದೆ. ಉಳಿದ 7 ಜಿಲ್ಲೆಗಳಲ್ಲಿ ಸಮವಸ್ತ್ರ ನೀಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮುಂಬರುವ ದಿನಗಳಲ್ಲಿ ಎಲ್ಲ ವಿಭಾಗಗಳಿಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಸಮವಸ್ತ್ರ ಖರೀದಿಸಲಾಗುವುದು ಎಂದರು.
ಮರು ನಿಯೋಜನೆ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶಿಕ್ಷಕರ ನಿಯೋಜನೆ ಮತ್ತು ಮರು ನಿಯೋಜನೆ ಶೇ. 70 ರಷ್ಟು ಪೂರ್ಣಗೊಂಡಿದೆ. 2007ರ ವರ್ಗಾವಣೆ ನೀತಿ ಗೊಂದಲಮಯವಾಗಿದ್ದು, ಇದರಡಿ ಇದ್ದಂತಹ ಕೆಲವು ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಪತಿ-ಪತ್ನಿ ಪ್ರಕರಣಗಳಿಗೆ ಕೌನ್ಸಿಲಿಂಗ್ ಮೂಲಕ ಆದ್ಯತೆ ಮೇಲೆ ನಿಯೋಜನೆ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
34 ಶೈಕ್ಷಣಿಕ ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. 13 ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದು, ಅವರನ್ನು ಶಿಕ್ಷಕರಿಲ್ಲದ ಜಾಗಗಳಿಗೆ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು ಘಟಕವನ್ನು ರದ್ದುಪಡಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ನಿಯೋಜನೆ ಕಾರ್ಯ ನಡೆಯಲಿದೆ ಎಂದರು.
ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

Comments are closed.