ಕರ್ನಾಟಕ

ಅಧಿವೇಶನಕ್ಕೆ ಕೊಡಲಿ ಕಲಾಪಕ್ಕೆ ಗದ್ದಲದ ಗೆದ್ದಲು

Pinterest LinkedIn Tumblr

 

karnataka-assembly630-630x400

ಬೆಂಗಳೂರು, ಜು. ೧೮- ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಇಡೀ ಅಧಿವೇಶನಕ್ಕೆ ಕೊ‌ಡಲಿ ಪೆಟ್ಟು ನೀಡಿದಂತಾಗಿ ಕಲಾಪಕ್ಕೆ ಗದ್ದಲದ ಗೆದ್ದಲು ಹಿಡಿಯುವಂತಾಯಿತು.

ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಹಾಗೂ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕಳೆದ 3 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ ಪ್ರತಿಪಕ್ಷಗಳ ಸದಸ್ಯರು ಇಂದು ಸದನ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರೆಸಿದ್ದರಿಂದ ಉಂಟಾದ ಗೊಂದಲದ ವಾತಾವರಣದ ಮಧ್ಯೆಯೇ `ಧನ ವಿನಿಯೋಗ’ ವಿಧೇಯಕಕ್ಕೆ ಒಪ್ಪಿಗೆ ಪಡೆದ ನಂತರ ಸದನವನ್ನು ಸಂಜೆ 4.30ರವರೆಗೆ ಮುಂದೂಡಲಾಯಿತು.
ಪ್ರಮುಖ ವಿಧೇಯಕಗಳಿಗೆ ಗದ್ದಲ – ಗಲಾಟೆಯ ಮಧ್ಯೆಯೇ ಒಪ್ಪಿಗೆ ಪಡೆದಿರುವುದರಿಂದ ಸದನವನ್ನು ಅನಿರ್ದಿಷ್ಠಾವಧಿಗೆ ಮುಂದೂಡುವ ಖಚಿತತೆ ಹೆಚ್ಚಾಗಿದೆ.
ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಈ ತಿಂಗಳ 30ರ ವರೆಗೂ ನಡೆಯಬೇಕಿತ್ತು. ಈ ಅಧಿವೇಶನದಲ್ಲಿ ವಿವಿಧ ಇಲಾಖೆಗಳ ಬೇಡಿಕೆ ಮೇಲೆ ಚರ್ಚೆ, ಪೂರ್ಣ ಪ್ರಮಾಣದ ಬಜೆಟ್‌ಗೆ ಅಂಗೀಕಾರ, ವಿವಿಧ ವಿಧೇಯಕಗಳ ಚರ್ಚೆ ಎಲ್ಲವೂ ನಡೆಯಬೇಕಿತ್ತು. ಆದರೆ ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಜಾರ್ಜ್ ರಾಜೀನಾಮೆಗೆ ಬಿಗಿ ಪಟ್ಟು ಹಾಕಿರುವ ವಿಪಕ್ಷಗಳು ಸದನದಲ್ಲಿ ಆಹೋರಾತ್ರಿ ಧರಣಿಗಳನ್ನು ನಡೆಸಿವೆ. ಆದರೆ ಸರ್ಕಾರ ವಿಪಕ್ಷಗಳ ಬೇಡಿಕೆಗೆ ಮಣಿಯದೆ ಸಚಿವ ಜಾರ್ಜ್ ರಾಜೀನಾಮೆ ಇಲ್ಲ ಎಂಬ ಗಟ್ಟಿ ನಿಲುವಿಗೆ ಅಂಟಿಕೊಂಡಿದೆ.
ಸರ್ಕಾರ ಹಾಗೂ ವಿಪಕ್ಷಗಳ ಈ ಹಗ್ಗ ಜಗ್ಗಾಟಕ್ಕೆ ಸದನ ಕಲಾಪವನ್ನು ನುಂಗಿ ಹಾಕಿದೆ. ವಿಪಕ್ಷಗಳ ಜೊತೆ ಸಂದಾನ ನಡೆಸಿ ಬಿಕ್ಕಿಟ್ಟಿಗೆ ಅಂತ್ಯ ಕಾಣಿಸುವ ಸರ್ಕಾರದ ಆಶಯ ಈಡೇರದ ಕಾರಣ ಹಿಂದೆ ಧನ ವಿನಿಯೋಗ ವಿಧೇಯಕಗಳಿಗೆ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ಸಿದ್ಧತೆಯನ್ನು ಸರ್ಕಾರ ನಡೆಸಿದಂತಿದೆ.
ಸರ್ಕಾರದ ಈಗಿನ ಮನಸ್ಥಿತಿಯನ್ನು ಗಮನಿಸಿದರೆ ಇಂದು ಸಂಜೆಗೆ ಎರಡೂ ಸದನಗಳನ್ನು ಅನಿರ್ಧಿಷ್ಠಾವಧಿಗೆ ಮುಂದೂಡುವ ಸಾಧ್ಯತೆಗಳು ನಿಚ್ಚಳವಾಗಿವೆ.
ಇಂದು ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ಸದನದಲ್ಲಿ ಪೂರಕ ಅಂದಾಜನ್ನು ಮಂಡಿಸಿ ಸದನವನ್ನು ಅರ್ಧ ಗಂಟೆಗೆ ಮುಂದೂಡಲಾಯಿತು.
ಮತ್ತೆ ಅರ್ಧ ಗಂಟೆ ನಂತರ ಸದನ ಸಮಾವೇಶಗೊಂಡಾಗ ವಿಪಕ್ಷ ಸದಸ್ಯರು ಧರಣಿಯನ್ನು ಮುಂದುವರೆಸಿದರು. ವಿಪಕ್ಷ ಸದಸ್ಯರ ಹಠಮಾರಿ ಧೋರಣೆಯನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಮುಂದಾಗಿ ಅದರಂತೆ 2016ರ ಕರ್ನಾಟಕ ಧನ ವಿನಿಯೋಗ ವಿಧೇಯಕ ಸಂಖ್ಯೆ 2 ಮತ್ತು 3ನ್ನು ಸದನದಲ್ಲಿ ಮಂಡಿಸಿ ಅದಕ್ಕೆ ಸದನದ ಒಪ್ಪಿಗೆ ಪಡೆದರು.
ಧನ ವಿನಿಯೋಗ ವಿಧೇಯಕ ಮಂಡನೆಗೆ ಅಡ್ಡಿ ಮಾಡುತ್ತಿದ್ದ ವಿಪಕ್ಷ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷಗಳಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಅವರಿಗೆ ಚರ್ಚೆ ಬೇಕಾಗಿಲ್ಲ. ಇವರಿಗೆ ರಾಜ್ಯದ ಹಿತ ಮುಖ್ಯ ಆಲ್ಲ. ಇವರಿಗೆ ಪ್ರಚಾರ ಮತ್ತು ರಾಜಕೀಯ ಮುಖ್ಯ ಎಂದು ಟೀಕಿಸಿದರು.
ವಿರೋಧ ಪಕ್ಷಗಳು ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಿವೆ. ಪ್ರತಿ ಇಲಾಖೆಯ ಮೇಲೂ ಚರ್ಚೆಯಾಗಲಿ. ರಾಜ್ಯದ ಅಭಿವೃದ್ಧಿ ಹಾಗೂ ಪಾರದರ್ಶಕ ಆಡಳಿತ ನೀಡಲು ಸಹಕಾರ ನೀಡಲಿ ಎಂಬ ಉದ್ದೇಶದಿಂದ ಸದನ ಕರೆದಿದ್ದೆವು. ಆದರೆ ಇವರಿಗೆ ರಾಜ್ಯದ ಹಿತ ಬೇಕಾಗಿಲ್ಲ. ಪ್ರಚಾರ ರಾಜಕೀಯ ಅಷ್ಟೇ ಬೇಕು. ಸದನ ಸುವ್ಯವಸ್ಥೆಯಲ್ಲಿ ಇರದಿದ್ದರೂ ಅನಿವಾರ್ಯವಾಗಿ ವಿವಿಧ ಇಲಾಖೆಗಳ ಅನುದಾನ ಬೇಡಿಕೆ, ಧನ ವಿನಿಯೋಗ ವಿಧೇಯಕ ಇವುಗಳನ್ನು ಮಂಡಿಸುತ್ತಿದ್ದೇನೆ ಎಂದರು.
ಸಿದ್ದರಾಮಯ್ಯನವರ ಮಾತುಗಳಿಗೆ ತಿರುಗೇಟು ನೀಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಒಬ್ಬ ಸಚಿವನಿಗಾಗಿ ಸರ್ಕಾರ ಸದನವನ್ನು ಮುಂದೂಡುತ್ತಿದೆ. ಈ ತಿಂಗಳ 30ರ ವರೆಗೂ ಸದನ ನಡೆಸಲೇಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಧೋರಣೆಯನ್ನು ಖಂಡಿಸಿ ಧರಣಿ ನಿರತ ವಿಪಕ್ಷ ಸದಸ್ಯರು ಘೋಷಣೆಗಳನ್ನು ಮುಂದುವರೆಸಿದಾಗ ಅದಕ್ಕೆ ಜಗ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಬೇಡಿಕೆಗಳ ಧನ ವಿನಿಯೋಗ ವಿಧೇಯಕ ಮಂಡಿಸಿ ಸದನದ ಅಂಗೀಕಾರ ಪಡೆದರು.

ಧನ ವಿನಿಯೋಗ ವಿಧೇಯಕ
ಇಂದು ಸದನದಲ್ಲಿ 1 ಲಕ್ಷದ 72 ಸಾವಿರದ 97 ಕೋಟಿ 16 ಲಕ್ಷ ಹಾಗೂ 50 ಸಾವಿರ ರೂ.ಗಳಿಗೆ ಮೀರದಷ್ಟು ಮೊಬಲಗನ್ನು ಮಾತ್ರ ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಎಂಬ ಅಂಶವನ್ನೊಳಗೊಂಡ ಧನ ವಿನಿಯೋಗ ವಿಧೇಯಕಕ್ಕೆ ಸದನ ಧ್ವನಿ ಮತದಿಂದ ಅಂಗೀಕಾರ ನೀಡಿತು.
ಇದರ ಜೊತೆಗೆ 2,916 ಕೋಟಿ 47 ಲಕ್ಷದ 42 ಸಾವಿರ ರೂ.ಗಳ ಕರ್ನಾಟಕ ಧನ ವಿನಿಯೋಗದ ವಿಧೇಯಕ ಸಂಖ್ಯೆ 3ಕ್ಕೂ ಸದನ ಒಪ್ಪಿಗೆ ನೀಡಿತು.

ವಿಧೇಯಕ ಅಂಗೀಕಾರ
ವಿಧೇಯಕ ಅಂಗೀಕಾರ ನಂತರ ಕರ್ನಾಟಕ ನಗರಾಭಿವೃದ್ಧಿ ತಿದ್ದುಪಡಿ ವಿಧೇಯಕಕ್ಕೂ ಸದನ ಒಪ್ಪಿಗೆ ನೀಡಿತು. ಇದಾದ ನಂತರ ಸಭಾಧ್ಯಕ್ಷರು ಸದನವನ್ನು ಸಂಜೆ 4 ಗಂಟೆಗೆ ಮುಂದೂಡಿದರು.

Comments are closed.