ಕರ್ನಾಟಕ

ಕೆಂಗಲ್ ಪ್ರತಿಮೆ ಬಳಿ ಬಿಜೆಪಿ ನ್ಯಾಯದ ಕೂಗು

Pinterest LinkedIn Tumblr

kenಬೆಂಗಳೂರು, ಜು. ೧೫- ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್‌ರವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಳೆದ 2 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ಸದನದ ಹೊರಗೂ ತನ್ನ ಹೋರಾಟವನ್ನು ತೀವ್ರಗೊಳಿಸಿದ್ದು, ವಿಧಾನಸೌಧದ ಮುಂದೆ ಬಿಜೆಪಿ ಶಾಸಕರು ಧರಣಿ ಸತ್ಯಾಗ್ರಹ ನಡೆಸಿದರು.

ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಬಳಿ ಬಿಜೆಪಿ ಶಾಸಕರುಗಳು ಧರಣಿ ಸತ್ಯಾಗ್ರಹ ನಡೆಸಿ ಸಚಿವ ಜಾರ್ಜ್‌ರವರ ರಾಜೀನಾಮೆಗೆ ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಈ ಧರಣಿ ಸತ್ಯಾಗ್ರಹದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಪಾಲ್ಗೊಂಡಿದ್ದರು.

ಹೋರಾಟ ನಿಲ್ಲದು
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸಚಿವ ಜಾರ್ಜ್‌ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು. ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಹಾಗೂ ಹೋರಾಟದ ಸ್ವರೂಪದ ಬಗ್ಗೆ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ದೂರಿದರು. ಈ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಜಾರ್ಜ್ ರಾಜೀನಾಮೆ ನೀಡಲೇಬೇಕು ಎಂದು ಯಡಿಯೂರಪ್ಪನವರು ಪುನರುಚ್ಚರಿಸಿದರು.
ಸಿಎಂ ರಾಜೀನಾಮೆ ನೀಡಲಿ
ರಾಜ್ಯದಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಜಾರ್ಜ್‌ಗಿಂತ ಮೊದಲು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ದುರಂಹಕಾರಿ ಮುಖ್ಯಮಂತ್ರಿ ಎಂದು ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಆಗ್ರಹಿಸಿದರು.
ಧಿಕ್ಕಾರದ ಘೋಷಣೆ
ಬೆಳಿಗ್ಗೆ 10 ಗಂಟೆಗೆ ಧರಣಿ ಸತ್ಯಾಗ್ರಹ ಆರಂಭಿಸಿದ ಬಿಜೆಪಿ ಶಾಸಕರು ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ಮಲ್ಲಿಕಾರ್ಜುನ ಬಂಡೆ, ಗಣಪತಿ ಸಾವು ನ್ಯಾಯವೇ? ಸಿಬಿಐ ತನಿಖೆ ನಡೆಸಿ, ನ್ಯಾಯ ಒದಗಿಸಿ, ಕಾಂಗ್ರೆಸ್ ನಡಿಗೆ ಆತ್ಮಹತ್ಯೆ ಕಡೆಗೆ, ತೊಲಗಲಿ, ತೊಲಗಲಿ ಕೆ.ಜೆ. ಜಾರ್ಜ್ ತೊಲಗಲಿ. ಸೋನಿಯಾ-ರಾಹುಲ್ ಕಣ್ಣು ಬಿಡಿ, ಕಿವಿ ಕೊಡಿ ಎಂಬ ಭಿತ್ತಿ ಫಲಕಗಳನ್ನು ಹಿಡಿದು ಜೋರು ಧ್ವನಿಯಲ್ಲಿ ಘೋಷಣೆಗಳನ್ನು ಹಾಕಿದರು.

Comments are closed.