ಬೆಂಗಳೂರು, ಜು.೧೫: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಮುಂದಿಟ್ಟು ವಿರೋಧ ಪಕ್ಷಗಳು ವಿಧಾನಮಂಡಲದಲ್ಲಿ ಧರಣಿ ನಡೆಸುತ್ತಿರುವುದರಿಂದ ಕಲಾಪ ಮುಂದೂಡಲು ಸರ್ಕಾರ ನಿರ್ಧರಿಸಿದರೆ, ಹೋರಾಟವನ್ನು ಸದನದ ಹೊರಗೆ ಮುಂದುವರಿಸಲು ವಿರೋಧ ಪಕ್ಷಗಳು ನಿಶ್ಚಯಿಸಿವೆ.
ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಧುಮುಕಿದ್ದು, ಸೋಮವಾರದಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ವಿಧಾನಮಂಡಲದಲ್ಲಿ ನಡೆದ ಧರಣಿಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಜೆಡಿಎಸ್, ವಿಧಾನಮಂಡಲದ ಹೊರಗೆ ಪ್ರತ್ಯೇಕವಾಗಿ ಹೋರಾಟ ನಡೆಸಲು ಮುಂದಾಗಿದೆ.
ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ವಿರೋಧ ಪಕ್ಷಗಳ ಪ್ರಮುಖ ಬೇಡಿಕೆ. ಆದರೆ ಈ ಎರಡೂ ಬೇಡಿಕೆಗಳಿಗೆ ಸರ್ಕಾರ ಮಣಿಯುವ ಲಕ್ಷಣ ಕಾಣುತ್ತಿಲ್ಲ. ಮಾತ್ರವಲ್ಲ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಪೊಲೀಸರು ಸಮರ್ಥರಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ನ್ಯಾಯಾಂಗ ತನಿಖೆಗೂ ವಹಿಸಲಾಗುವುದು. ತನಿಖೆ ನಡೆಯದೆ ಜಾರ್ಜ್ ಅವರನ್ನು ತಪ್ಪಿತಸ್ಥನನ್ನಾಗಿ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿ, ಜಾರ್ಜ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಹೈಕಮಾಂಡ್ ಕೃಪಾಕಟಾಕ್ಷ ಜಾರ್ಜ್ ಅವರ ಮೇಲೆ ಇರುವುದರಿಂದ ಸದ್ಯಕ್ಕೆ ಜಾರ್ಜ್ ಬಚಾವಾಗಿದ್ದಾರೆ. ನಾಳೆ ದೆಹಲಿಯಲ್ಲಿ ನಡೆಯುವ ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿವರ ನೀಡಲಿದ್ದಾರೆ ಎನ್ನಲಾಗಿದೆ.
ಸರ್ಕಾರ ಮತ್ತು ವಿಪಕ್ಷಗಳ ನಡುವೆ ಉಂಟಾಗಿರುವ ಈ ಬಿಕ್ಕಟ್ಟು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮಡಿಕೇರಿ ಬಂದ್ ನಡೆಸಲಾಗಿದೆ. ರಾಜ್ಯ ಬಂದ್ ಕರೆ ನೀಡಲು ಕೂಡ ಬಿಜೆಪಿ ಚಿಂತನೆ ನಡೆಸುತ್ತಿದೆ. ಒಟ್ಟಿನಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿರೋಧ ಪಕ್ಷಗಳು ಮುಂದಾದರೆ, ಸರ್ಕಾರ, ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ.
ಈ ಮಧ್ಯೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಂಡಿದೆ. ನಿವೃತ್ಯ ನ್ಯಾಯಾಧೀಶರಿಂದ ತನಿಖೆ ನಡೆಸುವ ಸಂಬಂಧ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
Comments are closed.