ವಿಯೆಟ್ನಾಂ ಯುದ್ಧದ ವೇಳೆ ಕಾಡಿಗೆ ಪರಾರಿಯಾಗಿ ಸುಮಾರು 41 ವರ್ಷಗಳ ಕಾಲ ಕಾಡಿನಲ್ಲೇ ಜೀವಿಸಿದ ನಿಜ ಜೀವನದ ‘ಟಾರ್ಜನ್’ಗಳೆನಿಸಿರುವ ತಂದೆ-ಮಗನ ಕತೆ ಇದು. ಕ್ವಾಂಗ್ ನ್ಗಾಯ್ನ ಟಾಯ್ ಟ್ರಾ ಜಿಲ್ಲೆಯ ಅರಣ್ಯದಲ್ಲಿ ಹೊ ವಾನ್ ಲಾಂಗ್ (42) ಮತ್ತು ಆತನ ತಂದೆ ಹೊ ವಾನ್ ಥನ್್ಹ ಸುಮಾರು 41 ವರ್ಷಗಳ ಕಾಲ ಕಾಡಿನಲ್ಲೇ ಬದುಕಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಹೊ ವಾನ್ ಥನ್್ಹ ತನ್ನ ಎರಡು ವರ್ಷದ ಮಗನ ಜತೆಗೆ ಕಾಡಿಗೆ ಪರಾರಿಯಾಗಿದ್ದ. ಮುಂದಿನ ನಾಲ್ಕು ದಶಕಗಳನ್ನು ಕಾಡಿನಲ್ಲೇ ಆಶ್ರಯ ಪಡೆದು, ತಮ್ಮನ್ನು ತಾವು ಹೊರಜಗತ್ತಿನಾದ್ಯಂತ ಬಚ್ಚಿಟ್ಟುಕೊಂಡಿದ್ದರು.
2013ರಲ್ಲಿ ಪತ್ತೆಯಾದ ಅವರು, ಅಲ್ಲಿಂದೀಚೆಗೆ ಕಾಡಿನಿಂದ ನಾಡಿಗೆ ಸಮೀಪದ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರು ಡೊಕಾಸ್ಟವೇಯ ಖ್ಯಾತ ಫೋಟೊಗ್ರಾಫರ್ ಅಲ್ವಾರೊ ಸೆರೆಝೊರೊಂದಿಗೆ ಕಾಡಿಗೆ ತೆರಳಿ ತಾವು ಜೀವನ ಕಳೆದ ಸ್ಥಳಗಳನ್ನು ಪರಿಚಯಿಸಿದ್ದಾರೆ.
ವಿಯೆಟ್ನಾಂ ಯುದ್ಧದ ಸಂದರ್ಭ ಥನ್್ಹ ಟ್ರಾ ಕೆಮ್ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆ ವೇಳೆ ಗಣಿ ಸ್ಫೋಟವೊಂದರಲ್ಲಿ ಆತನ ಪತ್ನಿ ಮತ್ತು ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ಆಘಾತಗೊಂಡು, ಎರಡು ವರ್ಷದ ಮಗುವನ್ನು ಎತ್ತಿಕೊಂಡು ಕಾಡು ಸೇರಿದ ಇವರು ಯಾರೊಂದಿಗೂ ಸಂಪರ್ಕವನ್ನಿಟ್ಟು ಕೊಂಡಿರಲಿಲ್ಲ. ಹಣ್ಣು, ಗೆಡ್ಡೆ ಗೆಣಸುಗಳನ್ನು ತಿಂದು ತಂದೆ-ಮಗ ಬದುಕಿದ್ದರು. ಮರದ ತೊಗಟೆಗಳನ್ನು ಸುತ್ತಿಕೊಳ್ಳುತ್ತಿದ್ದರು. ನೆಲದಿಂದ ಐದು ಅಡಿಗಳಷ್ಟುಎತ್ತರದಲ್ಲಿ ಮರದಿಂದ ಮಾಡಲಾದ ಗುಡಿಸಲೊಂದರಲ್ಲಿ ಆಶ್ರಯ ಪಡೆದಿದ್ದರು. ಸಂಶೋಧನಾ ತಂಡವೊಂದು ಕಾಡಿನಲ್ಲಿ ಇಬ್ಬರು ‘ಕಾಡಿನ ಮನುಷ್ಯರು’ ದೂರದಲ್ಲಿ ಅಹಜವಾಗಿ ವರ್ತಿಸುವುದನ್ನು ಕಂಡು ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದರು.

Comments are closed.