ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು ಇಂದು ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಮಡಿಕೇರಿ, ಗಣಪತಿ ಹುಟ್ಟೂರು ರಂಗಸಮುದ್ರ ಮಂಗಳೂರಿನಲ್ಲಿ ಕುಟುಂಬದ ಸದಸ್ಯರು ಸ್ನೇಹಿತರು ಹಿತೈಷಿಗಳ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡು ನಗರಕ್ಕೆ ವಾಪಸಾಗಿರುವ ಸಿಐಡಿ ಅಧಿಕಾರಿಗಳು ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ನಾಳೆಯಿಂದ ಮುಂದುವರೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ವಿಷಯ ಪ್ರಸ್ತಾಪಿಸಿ ಧರಣಿ ಪ್ರತಿಭಟನೆ ನಡೆಸುವ ವೇಳೆ ಉತ್ತರ ನೀಡಲು ಸಹಕಾರಿಯಾಗುವಂತೆ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗುತ್ತದೆ.
ಕಳೆದ ಎರಡು ದಿನಗಳಿಂದ ಮಡಿಕೇರಿಯಲ್ಲೇ ಬೀಡು ಬಿಟ್ಟಿದ್ದ ಸಿಐಡಿ ಐಜಿ ನಿಂಬಾಳ್ಕರ್,ಎಸ್ಪಿ ಕುಮಾರಸ್ವಾಮಿ ನೇತೃತ್ವದ ೮ ಮಂದಿ ಅಧಿಕಾರಿಗಳ ತಂಡ ಮಡಿಕೇರಿ ವಿನಾಯಕ ಲಾಡ್ಜ್,ರಂಗಸಮುದ್ರ ಇನ್ನಿತರ ಕಡೆಗಳಲ್ಲಿ ಪರಿಶೀಲನೆ ನಡೆಸಿ ತಂದೆ ತಾಯಿ ಸಹೋದರ,ಪತ್ನಿ ಮಕ್ಕಳು ಸೇರಿ ಸಂಬಂಧಿಕರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದೆ.
ಮಂಗಳೂರಿನಲ್ಲಿ ಮತ್ತೊಂದು ತಂಡ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು ಎಲ್ಲಾ ಕೋನಗಳಿಂದಲೂ ಪ್ರಾಥಮಿಕ ತನಿಖೆ ಮುಗಿಸಿದೆ.
ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಕಥೆ ಕಟ್ಟಿದರಾ ? ಎನ್ನುವ ಅನುಮಾನ ಶುರುವಾಗಿದೆ.ಏಕೆಂದರೆ ಗಣಪತಿ ತಂದೆ ಕುಶಾಲಪ್ಪ ದೂರು ಕೊಟ್ಟಿದ್ದರು ಎಂದು ಐಜಿ ಬಿ.ಕೆ. ಸಿಂಗ್ ಹೇಳಿದ್ದರು. ಆದರೆ ನಾನು ಯಾವುದೇ ದೂರು ಕೊಟ್ಟಿಲ್ಲ ಹೇಳಿಕೆ ಪ್ರತಿಗೆ ಸಹಿಯನ್ನಷ್ಟೇ ಹಾಕಿದ್ದೇನೆ ಎಂದು ಗಣಪತಿ ತಂದೆ ಹೇಳಿದ್ದಾರೆ. ಹಾಗಾದರೆ ಇದು ಸಚಿವ ಜಾರ್ಜ್,ಉನ್ನತ ಅಧಿಕಾರಿಗಳಾದ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಅವರನ್ನು ರಕ್ಷಿಸುವ ತಂತ್ರವನ್ನು ಸರ್ಕಾರ ನಡೆಸುತ್ತಿದೆಯೇ ಎನ್ನುವ ಅನುಮಾನಗಳು ಹುಟ್ಟು ಹಾಕುವಂತೆ ಮಾಡಿದೆ.
ಸಿಬಿಐ ತನಿಖೆಗೆ ಒತ್ತಡ
ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.ಆದರೆ ಸರ್ಕಾರ ಮಾತ್ರ ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎನ್ನುತ್ತಿದೆ. ಒಟ್ಟಿನಲ್ಲಿ ಹಿರಿಯ ಅಧಿಕಾರಿಯೊಬ್ಬರು ಸಾವಿಗೂ ಮುನ್ನ ಕಾರಣ ಹೇಳಿ ಹೋದರು,ಕಾರಣ ಅದಲ್ಲ. ಬೇರೆಯೇ ಇದೆ ಎಂದು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
Comments are closed.