ಕರ್ನಾಟಕ

ಆನ್‌ಲೈನ್ ಮೂಲಕ ಸಣ್ಣ ಉದ್ದಿಮೆದಾರರಿಗೆ ಸಾಲ

Pinterest LinkedIn Tumblr

onlineಬೆಂಗಳೂರು, ಜು. ೭ – ಸಣ್ಣ ಉದ್ದಿಮೆದಾರರಿಗೆ ಆನ್‌ಲೈನ್‌ನಲ್ಲೇ ಸಾಲ ನೀಡಲು ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಬಂಧ ಬ್ಯಾಂಕ್‌ಗಳ ಜತೆ ಚರ್ಚೆ ನಡೆಸುವುದಾಗಿ ಕೇಂದ್ರದ ನೂತನ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಗ್ವಾಲ್ ಹೇಳಿದರು.

ಲಘು ಉದ್ಯೋಗ ಭಾರತಿ ನಗರದಲ್ಲಿಂದು ಆಯೋಜಿಸಿದ್ದ ಒಂದು ದಿನದ ದಕ್ಷಿಣ ವಲಯದ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಸಾಲದ ವಿತರಣೆ ಜಾಗೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಹಣಕಾಸು ಖಾತೆ ಸಚಿವ ಅರ್ಜುನ್ ರಾಮ್ ಮೇಗ್ವಾಲ್, ಬ್ಯಾಂಕ್‌ಗಳು ಆನ್‌ಲೈನ್‌ನಲ್ಲೇ ಸಾಲದ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ಪರಿಶೀಲನೆ ನಡೆಸಿ ಸಾಲ ಮಂಜೂರು ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಈ ಸಂಬಂಧ ಶೀಘ್ರದಲ್ಲೇ ಬ್ಯಾಂಕುಗಳ ಮುಖ್ಯಸ್ಥರ ಜೊತೆ ಸಭೆ ನಡೆಸುವುದಾಗಿ ಅವರು ಹೇಳಿದರು.

ಆನ್‌ಲೈನ್‌ನಲ್ಲಿ ಸಾಲ ವಿತರಣೆಯ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದು ಜತೆಗೆ ಸಾಲ ವಿತರಣೆಯ ವಿಳಂಬವನ್ನು ತಪ್ಪಿಸಬಹುದು ಎಂದರು.

ಜಿಎಸ್‌ಟಿಗೆ ವಿರೋಧ ಬೇಡ

ದೇಶದ ಅಭಿವೃದ್ಧಿಯ ಎಂಜಿನ್ ಆಗುವ ಜಿಎಸ್‌ಟಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದಂತೆ ಮನವಿ ಮಾಡಿದ ಅವರು, ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಪಕ್ಷಾತೀತವಾಗಿ ಈ ಕಾಯ್ದೆಗೆ ಒಪ್ಪಿಗೆ ಸಿಗುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದರು.

ಜಿಎಸ್‌ಟಿ ಕಾಯ್ದೆಯಿಂದ ತೆರಿಗೆ ಪದ್ಧತಿಯಲ್ಲೂ ಸರಳೀಕರಣವಾಗುತ್ತದೆ. ವ್ಯಾಪಾರ ಉದ್ದಿಮೆ ನಡೆಸುವವರಿಗೂ ಸಲೀಸಾಗಿ ವ್ಯವಹಾರಗಳನ್ನು ನಡೆಸಲು ಅನುಕೂಲವಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರ ಕಾಯ್ದೆಯನ್ನು ಜಾರಿ ಮಾಡುವ ಕೇಂದ್ರದ ತೀರ್ಮಾನಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.

ಸಣ್ಣ ಉದ್ದಿಮೆದಾರರಿಗೆ ಎನ್‌ಪಿಎ ಅವಧಿಯನ್ನು 3 ತಿಂಗಳಿಂದ 6 ತಿಂಗಳಿಗೆ ವಿಸ್ತರಿಸುವ ಸಂಬಂಧ ಸದ್ಯದಲ್ಲಿಯೇ ಸುತ್ತೋಲೆ ಹೊರಡಿಸುವುದಾಗಿಯೂ ಅವರು ಹೇಳಿದರು.

ಈ ಸಂದರ್ಭದಲ್ಲಿ ಉದ್ಯೋಗ ಭಾರತಿಯ ಅಧ್ಯಕ್ಷ ರವೀಂದ್ರ ಭಂಡಾರಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಗುಪ್ತ, ಯಜ್ಞ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Comments are closed.