ಕರ್ನಾಟಕ

ಸಿದ್ದು ಸರ್ಕಾರಕ್ಕೆ ಮತದಾರರ ಶಾಪ

Pinterest LinkedIn Tumblr

bsy-621x400ಬೆಂಗಳೂರು, ಜು. ೭-ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ದರಿದ್ರ ಮತ್ತು ಅನಿಷ್ಠ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ಕರೆ ನೀಡಿದರು.

ಬಿಜೆಪಿ ಕೇಂದ್ರ ಕಛೇರಿಯಲ್ಲಿ ಏರ್ಪಡಿಸಿದ್ದ ನೂತನ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ಪ್ರತಾಪ್‌ಸಿಂಹ ಅಧಿಕಾರ ವಹಿಸಿಕೊಂಡ ಸಮಾರಂಭದಲ್ಲಿ ಅವರಿಗೆ ಪಕ್ಷದ ಬಾವುಟ ನೀಡಿ ಮಾತನಾಡಿದ ಯಡಿಯೂರಪ್ಪ, ಈ ಸರ್ಕಾರದ ವಿರುದ್ಧ ಜನ ಶಾಪ ಹಾಕುತ್ತಿದ್ದಾರೆ. ಯಾವಾಗ ಚುನಾವಣೆ ಬರುತ್ತದೋ ಎಂದು ಎದುರು ನೋಡುತ್ತಿದ್ದಾರೆ ಎಂದರು.

ಸಿದ್ಧರಾಮಯ್ಯ ಸರ್ಕಾರದ ವಿರೋಧಿ ಮತಗಳನ್ನಷ್ಟೇ ನಂಬಿಕೊಂಡು ನಾವು ಚುನಾವಣೆ ಎದುರಿಸುವ ಅಗತ್ಯವಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಆದ ಸಾಧನೆ, ಜಾರಿಗೆ ತಂದ ಕಾರ್ಯಕ್ರಮಗಳು, ಪ್ರಧಾನಿ ನರೇಂದ್ರಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಸಕಾರಾತ್ಮಕ ಮತಗಳಿಸಿ ಅಧಿಕಾರಕ್ಕೆ ಬರಬಹುದು. 150 ಸ್ಥಾನಗಳಲ್ಲಿ ಗೆದ್ದೆ ಗೆಲ್ಲಬೇಕು ಎಂದು ಅವರು ಹೇಳಿದರು.

ಯುವ ಕಾರ್ಯಕರ್ತರು ಪೂರ್ಣ ಪ್ರಮಾಣದ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಸಂಘಟನೆಯನ್ನು ಬಲಪಡಿಸಬೇಕು. ಹೋರಾಟ ಮಾಡದೆ ಗೆಲ್ಲುವು ಸಾಧ್ಯವಿಲ್ಲ. ಕೇವಲ ಜವಾಬ್ದಾರಿ ತೆಗೆದುಕೊಂಡು ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡರೆ ಸಾಲದು ಎಂದರು.

ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು ಎಂದು ಅವರು ಕರೆ ನೀಡಿದರು.

ಸಂಸದೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಕ್ರಮಣದ ಕಾಲಘಟ್ಟದಲ್ಲಿ ನಾವಿದ್ದೇವೆ. ಜನ ರಾಜಕೀಯ ಬದಲಾವಣೆ ಬಯಸುತ್ತಿದ್ದಾರೆ. ಸಾಮಾನ್ಯವಾಗಿ ಚುನಾವಣೆಗೆ ಆರು ತಿಂಗಳು ಇರುವ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಅಲೆ ಎಳುವುದು ಸಹಜ. ಆದರೆ ಸಿದ್ಧರಾಮಯ್ಯನವರ ಸರ್ಕಾರ ಮೂರುವರೆ ವರ್ಷದ ಅವಧಿಯಲ್ಲೇ ಜನ ವಿರೋಧಿ ಅಲೆ ಎದ್ದಿದೆ ಎಂದರು.

ಈ ಸರ್ಕಾರದ ದುರಾಡಳಿತ ಕೊನೆಯಾಗಬೇಕು ಎಂದು ಜನ ಬಯಸುತ್ತಿದ್ದಾರೆ. ಅಂತಹ ಜನರಿಗೆ ನಾವು ಶಕ್ತಿ ತುಂಬಬೇಕು ಎಂದು ಯವ ಕಾರ್ಯಕರ್ತರಿಗೆ ಕರೆ ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂಸದ ಪ್ರತಾಪ್‌ಸಿಂಹ್ ಮಾತನಾಡಿ, ಯುವ ಕಾರ್ಯಕರ್ತರು ಕೇವಲ ಅಧಿಕಾರಕ್ಕಾಗಿ ಯುವ ಮೋರ್ಚಾ ಸೇರುವುದಾದರೆ ಅಂತವರ ಅಗತ್ಯವಿಲ್ಲ. ಪಕ್ಷವನ್ನು ಸಂಘಟಿಸಿ ಜನ ಸೇವೆ ಮಾಡವಂತಹ ಮನೋಭಾವ ಇದ್ದವರು ಸಂಘಟನೆಗೆ ಬರಬೇಕು.

ಈ ಮೋರ್ಚಾವನ್ನು ವೇದಿಕೆಯನ್ನಾಗಿ ಬಳಸಿಕೊಂಡು ಪಕ್ಷಕ್ಕೆ ನಿಷ್ಠೆ, ಬದ್ಧತೆ ತೋರುವ ಮೂಲಕ ಮುಂಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಯಡಿಯೂರಪ್ಪನವರ ಆಶಯದಂತೆ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಕೊಳಕು ರಾಜಕಾರಣವನ್ನು ಶುದ್ಧೀಕರಣ ಮಾಡಬೇಕು ಎಂಬ ಛಲ ಯುವಕರಲ್ಲಿರಬೇಕು. ಗುರಿ ಸಾಧನೆ ಮಾಡುವತ್ತ ತಾಳ್ಮೆಯಿಂದ ಹೋರಾಟ ಮಾಡಬೇಕು. ಸಕಾರಾತ್ಮಕ ಚಿಂತನೆ ಇರಬೇಕು ಎಂದರು. ಮುಖಂಡರಾದ ಅರುಣ್‌ಕುಮಾರ್, ಯುವ ಮೋರ್ಚಾದ ಮಾಜಿ ಅಧ್ಯಕ್ಷ ಮುನಿರಾಜುಗೌಡ ಮತ್ತಿತರರು ಹಾಜರಿದ್ದರು.

Comments are closed.