
ಬೆಂಗಳೂರು,ಜು.೫-ಕೇವಲ ೬ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಮಾಡಿದ ನಾಲ್ಕು ಬಾರಿಯ ವರ್ಗಾವಣೆಯಿಂದ ನೊಂದ ಲೋಕಾಯುಕ್ತ ವಿಶೇಷ ತನಿಖಾ ತಂಡ(ಎಸ್ಐಟಿ)ಯ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಸುರೇಶ್ ಕುನ್ಹಿ ಮೊಹಮ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಸುರೇಶ್ ಕುನ್ಹಿ ಮೊಹಮ್ಮದ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಬರುವ ಜನವರಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ಹುದ್ದೆ ಬಡ್ತಿ ಹೊಂದಲಿದ್ದ ಸುರೇಶ್ ಅವರನ್ನು ಸರ್ಕಾರ ೬ತಿಂಗಳಲ್ಲಿ ೪ಕಡೆಗಳಿಗೆ ವರ್ಗಾವಣೆ ಮಾಡಿತ್ತು.
ಡಿಸೆಂಬರ್ವರೆಗೆ ಗುಲ್ಬರ್ಗ ವಲಯದ ಐಜಿಪಿಯಾಗಿದ್ದ ಸುರೇಶ್ ಅವರನ್ನು ಆಗ್ನಿಶಾಮಕದಳ ನಂತರ ಆಡಳಿತ ವಿಭಾಗ ತದನಂತರ ಪೊಲೀಸ್ ಗೃಹಮಂಡಲಿ ಆದಾದ ಮೇಲೆ ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆಗೊಳಿಸಲಾಗಿತ್ತು.
ಪದೇ ಪದೇ ವರ್ಗಾವಣೆಯಿಂದ ನೊಂದ ಅವರು ಕಳೆದ ಎರಡು ತಿಂಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಯುಪಿಎಸ್ಸಿಯ ಅನುಮತಿ ಪಡೆದ ರಾಜ್ಯಸರ್ಕಾರ ಸುರೇಶ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದೆ.
ಕೇರಳ ಮೂಲದ ಸುರೇಶ್ ಅವರು ೧೯೯೩ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
Comments are closed.