ಕರ್ನಾಟಕ

ಸಭಾಪತಿ ಪೀಠಕ್ಕೆ ಹಳೇ ದೋಸ್ತಿಗಳ ರಾಜಕಾರಣ: ಬಿಜೆಪಿಗೆ ಕರ್ಮಕಾರಣ

Pinterest LinkedIn Tumblr

karnataka-assembly630-630x400ಬೆಂಗಳೂರು, ಜು. ೫- ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆ ಸಂದರ್ಭದಲ್ಲಿ ಹಾವು- ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ದೋಸ್ತಿ ರಾಜಕಾರಣಕ್ಕೆ ಮುಂದಾಗಿದೆ.

ವಿಧಾನ ಪರಿಷತ್ತಿನಲ್ಲಿ ಸಭಾಪತಿ ಸ್ಥಾನವನ್ನು ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಸಾಧಿಸಿ ತನ್ನದಾಗಿಸಿಕೊಂಡಿತ್ತು. ಬಿಜೆಪಿ ಜೊತೆ ಕೈಜೋಡಿಸಿ ಉಪ ಸಭಾಪತಿ ಸ್ಥಾನವನ್ನು ಎರಡು ವರ್ಷಗಳ ಹಿಂದೆ ಪಡೆದುಕೊಂಡಿದ್ದ ಜೆಡಿಎಸ್ ಈಗ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಜೊತೆ ಕೂ‌ಡಾವಳಿ ಮಾಡಿಕೊಳ್ಳಲು ಮುಂದಾಗುವ ಮೂಲಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನವನ್ನೇ ಕೈವಶ ಮಾಡಿಕೊಳ್ಳಲು ಮುಂದಾಗಿದೆ.

ಶತಾಯ ಗತಾಯ ಬಿಜೆಪಿಯ ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಜಗಳವನ್ನು ಮರೆತು ಜೆಡಿಎಸ್ ಪಕ್ಷದ ಜೊತೆ ಕೈಜೋಡಿಸಲು ಮುಂದಾಗಿದೆ.

ಈಗಿನ ಈ ಎರಡೂ ಪಕ್ಷಗಳ ಹೊಸ ಮೈತ್ರಿ ಸೂತ್ರದ ಪ್ರಕಾರ ಸಭಾಪತಿ ಹುದ್ದೆಯನ್ನು ಜೆಡಿಎಸ್ ಪಕ್ಷಕ್ಕೂ, ಉಪಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೂ ಬಿಟ್ಟುಕೊಡುವ ಒಪ್ಪಂದ ಆಗಿದೆ.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿದ್ದರೂ ಬಹುಮತವನ್ನು ಹೊಂದಿಲ್ಲ. ಹಾಗಾಗಿ ಸಭಾಪತಿ ಸ್ಥಾನವನ್ನು ಪಡೆಯಲು ಬೇರೆ ಪಕ್ಷಗಳ ಜೊತೆ ಕೈ ಜೋಡಿಸುವ ಅನಿವಾರ್ಯತೆ ಇದೆ. ಜೆಡಿಎಸ್ ಪಕ್ಷ ಸಭಾಪತಿ ಸ್ಥಾನವನ್ನು ಬಿಟ್ಟುಕೊಟ್ಟರೆ ಮೈತ್ರಿಗೆ ಮುಂದಾಗುವುದಾಗಿ ಸ್ಪಷ್ಟವಾಗಿ ಹೇಳಿದ ಕಾರಣ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಉಪಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಬಸವರಾಜ ಹೊರಟ್ಟಿ ಸಭಾಪತಿ

ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಆಗಿರುವ ಒಪ್ಪಂದದಂತೆ ಜೆಡಿಸ್‌ನ ಹಿರಿಯ ಸದಸ್ಯ ಸತತವಾಗಿ 7 ಬಾರಿ ವಿಧಾನ ಪರಿಷತ್ತಿಗೆ ಆರಿಸಿ ಬಂದಿರುವ ಬಸವರಾಜ ಹೊರಟ್ಟಿ ನೂತನ ಸಭಾಪತಿಗಳಾಗುವುದು ಬಹುತೇಕ ಖಚಿತ.

ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ನೂತನ ಸಭಾಪತಿ ಸ್ಥಾನದಲ್ಲಿ ಕೂರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಮ್ಮತಿ ವ್ಯಕ್ತಪಡಿಸಿದ್ದಾರೆ.

ಸಮಾಲೋಚನೆ

ಇಂದು ನಡೆದ ವಿಧಾನ ಪರಿಷತ್ತಿನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ನಂತರ ಜೆಡಿಎಸ್ ನಾಯಕರೊಂದಿಗೆ ಚರ್ಚೆ ನ‌ಡೆಸಿದ್ದು ಈ ಸಂದರ್ಭದಲ್ಲಿ ಮೈತ್ರಿ ಪ್ರಸ್ತಾಪಕ್ಕೆ ಒಪ್ಪಿಗೆ ಸಹ ದೊರೆತಿದೆ.

ಈ ಸಮಾಲೋಚನೆಯಲ್ಲಿ ಜೆಡಿಎಸ್‌ನ ಶಾಸಕ ಎಚ್.ಡಿ. ರೇವಣ್ಣ, ಬಸವರಾಜ ಹೊರಟ್ಟಿ , ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಹ ಪಾಲ್ಗೊಂಡಿದ್ದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬುದು ಸಾಬೀತಾಗಿದೆ.

ಶಂಕರಮೂರ್ತಿ ರಾಜೀನಾಮೆ?

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿರುವುದರಿಂದ ಈ ಎರಡೂ ಪಕ್ಷಗಳು ಸೇರಿ ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಸದನದಲ್ಲಿ ಮಂಡಿಸುವ ಸಾಧ್ಯತೆ ಇರುವುದರಿಂದ ಈ ಅವಿಶ್ವಾಸ ನಿರ್ಣಯ ಮಂಡನೆಗೂ ಮೊದಲೇ ಸಭಾಪತಿ ಶಂಕರಮೂರ್ತಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಬಹುತೇಕ ಮುಂದಿನ ವಾರ ವಿಧಾನ ಪರಿಷತ್ತಿಗೆ ಬಸವರಾಜ ಹೊರಟ್ಟಿ ಅವರು ನೂತನ ಸಭಾಪತಿ ಆಗುವುದು ಬಹುತೇಕ ನಿಶ್ಚಿತವಾಗಿದೆ.

ವಿಧಾನ ಪರಿಷತ್ತಿನ ಈಗಿನ ಬಲಾಬಲದ ಪ್ರಕಾರ ಒಟ್ಟು 75 ಸ್ಥಾನಗಳಲ್ಲಿ 4 ಸ್ಥಾನಗಳು ಖಾಲಿ ಇದ್ದು, ಉಳಿದಂತೆ ಕಾಂಗ್ರೆಸ್ ಪಕ್ಷ 30 ಸದಸ್ಯರು, ಜೆಡಿಎಸ್ 12 ಸದಸ್ಯರನ್ನು, ಬಿಜೆಪಿ 24 ಸದಸ್ಯರನ್ನು ಹೊಂದಿದೆ. ಐವರು ಪಕ್ಷೇತರ ಸದಸ್ಯರು ಇದ್ದಾರೆ.

Comments are closed.