ಕರ್ನಾಟಕ

ಬಾಡಿಗೆ ನೆಪದಲ್ಲಿ ವೃದ್ದೆಯರ ಆಭರಣ ದೋಚುತ್ತಿದ್ದ ಆರೋಪಿ ಸೆರೆ

Pinterest LinkedIn Tumblr

arrest

ಬೆಂಗಳೂರು: ಬಾಡಿಗೆ ಕೇಳುವ ನೆಪದಲ್ಲಿ ವೃದ್ಧೆಯರ ಮನೆಗೆ ಹೋಗಿ ಅವರನ್ನು ಪರಿಚಯಿಸಿಕೊಂಡು ಅವರಿಗೆ ಮತ್ತುಬರುವ ಜ್ಯೂಸ್ ಕುಡಿಸಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಹನುಮಂತನಗರ ಪೊಲೀಸರು ಬಂಧಿಸಿ 17.10 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಬಿಲ್ವಾರದಹಳ್ಳಿ ಟಿಪ್ಪು ಸರ್ಕಲ್ ಸಮೀಪದ ನಿವಾಸಿ ಮುನಾಜೀರ್ ಅಹಮ್ಮದ್(34) ಬಂಧಿತ ಆರೋಪಿಯಾಗಿದ್ದು, ಈತನಿಂದ 17.10 ಲಕ್ಷ ರೂ. ಮೌಲ್ಯದ 570 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು 12 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಆರೋಪಿ ಮುನ್ನಾಜೀರ್ ಒಂಟಿಯಾಗಿ ವಾಸಿಸುವ ವೃದ್ಧೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಅವರನ್ನು ಪರಿಚಯಿಸಿಕೊಂಡು ಚಿನ್ನಾಭರಣ ದೋಚುವ ವೃತ್ತಿ ಮಾಡಿಕೊಂಡಿದ್ದನು. ಹನುಮಂತನಗರದ 7ನೇ ಕ್ರಾಸ್‌ನಲ್ಲಿ ವಾಸವಾಗಿರುವ ನರಸಮ್ಮ(83) ಎಂಬ ವೃದ್ದೆಯ ಮನೆ ಬಳಿ ಹೋಗಿ ಒಂದೆರಡು ದಿನ ಪರಿಚಯ ಮಾಡಿಕೊಂಡು ಜೂ.15ರಂದು ಸಂಜೆ 4.15ರಲ್ಲಿ ಇವರ ಮನೆಗೆ ಬಂದು ಪರಿಚಯಸ್ಥನಂತೆ ಮಾತನಾಡಿಸುತ್ತಾ ಬರುವಾಗಲೇ ತಂದಿದ್ದ ಜ್ಯೂಸ್‌ನಲ್ಲಿ ಮಾತ್ರೆಯನ್ನು ಹಾಕಿ ಬಲವಂತವಾಗಿ ಕುಡಿಸಿ ಅವರು ಪ್ರಜ್ಞೆ ತಪ್ಪಿದ ನಂತರ ಮೈಮೇಲಿದ್ದ 20 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದನು.

ಅಂದು ಸಂಜೆ ವೃದ್ಧೆಯ ಮೊಮ್ಮಗ ಶ್ರೀನಿವಾಸ್ ಬಾಬು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಈ ಹಿಂದೆಯೂ ಇದೇ ರೀತಿ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು. ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಇನ್‌ಸ್ಪೆಕ್ಟರ್ ದಿಲೀಪ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ಬಂಧಿಸಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದೆ.

ಆರೋಪಿ ಬಂಧನದಿಂದ ಹನುಮಂತನಗರ ವ್ಯಾಪ್ತಿಯ ಐದು ಪ್ರಕರಣ, ತ್ಯಾಗರಾಜನಗರದ ಮೂರು ಪ್ರಕರಣ, ಸಿ.ಕೆ.ಅಚ್ಚುಕಟ್ಟು , ತಲಘಟ್ಟಪುರ, ಸುಬ್ರಹ್ಮಣ್ಯಪುರ, ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಬೆಳಕಿಗೆ ಬಂದಂತಾಗಿದೆ. ದಕ್ಷಿಣ ವಿಭಾಗದ ಉಪಪೊಲೀಸ್ ಕಮೀಷನರ್ ಡಾ.ಶರಣಪ್ಪ , ಸಹಾಯಕ ಪೊಲೀಸ್ ಕಮೀಷನರ್ ಸಯ್ಯದ್ ಇಸಾಕ್, ಇನ್‌ಸ್ಪೆಕ್ಟರ್ ದಿಲೀಪ್‌ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Comments are closed.