ಕರ್ನಾಟಕ

ಶಾಲಾ ಮಕ್ಕಳಿಗೆ 5 ದಿನ ಹಾಲು ವಾರ್ಷಿಕ 550 ಕೋಟಿ ವೆಚ್ಚ

Pinterest LinkedIn Tumblr

sidddಬೆಂಗಳೂರು, ಜೂ. ೩೦ – ಶಾಲಾ ಮಕ್ಕಳಿಗೆ ಮೂರು ದಿನ ನೀಡುತ್ತಿರುವ ಹಾಲನ್ನು 5 ದಿನ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಪ್ರತಿ ವರ್ಷ 550 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಹೇಳಿದ್ದಾರೆ.

ಕ್ಷೀರಭಾಗ್ಯಕ್ಕೆ 550 ಕೋಟಿ ರೂ. ಹಾಗೂ ಕ್ಷೀರಧಾರೆಗೆ 950 ಕೋಟಿ ರೂ. ಸೇರಿದಂತೆ 1,500 ಕೋಟಿ ರೂ.ಅನ್ನು ರೈತರಿಗಾಗಿ ಸರ್ಕಾರ ಪ್ರತಿ ವರ್ಷ ನೀಡುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ನಗರದಲ್ಲಿಂದು ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ನೂರನ ಉತ್ಪನ್ನದ ಘಟಕದ ಉದ್ಘಾಟನೆ ಹಾಗೂ ಉಗ್ರಾಣ, ಮಾರುಕಟ್ಟೆ ಕಚೇರಿ, ಉಪಹಾರ ಗೃಹ ಮತ್ತು ಸಭಾಂಗಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೈತರಿಗೆ ಪ್ರತಿ ಲೀಟರ್‌ಗೆ ನೀಡುತ್ತಿರುವ 4 ರೂ. ಸಹಾಯ ಧನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಹಾಯಕರು, ಟೆಸ್ಟರ್‌ಗಳಿಗೆ ಪ್ರತಿ ಲೀ. 20 ಪೈಸೆ ಸಹಾಯ ಧನ ನೀಡುತ್ತಿದ್ದು, ಅದನ್ನು ಅರ್ಧದಷ್ಟು ಸಿಬ್ಬಂದಿಗೆ ಹಣ ನೀಡಿದ್ದು, ಉಳಿದರ್ಧ ಸಿಬ್ಬಂದಿಗೆ ಶೀಘ್ರದಲ್ಲೇ ಬಾಕಿ ಹಣ ನೀಡಲಾಗುವುದು ಎಂದು ಹೇಳಿದರು.

ಪ್ರತಿ ದಿನ 72 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಗಾಗಿ ಶಾಲಾ ಮಕ್ಕಳಿಗೆ ಕ್ಷೀರಧಾರೆ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಕೆಎಂಎಫ್ ಉತ್ಪನ್ನಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಹಾಲು ಉತ್ಪಾದಕ ರೈತರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಪಶುಸಂಗೋಪನಾ ಸಚಿವ ಎ. ಮಂಜು ಮಾತನಾ‌ಡಿ, ವಾರಕ್ಕೆ 5 ದಿನ ಶಾಲಾ ಮಕ್ಕಳಿಗೆ ಹಾಲು ನೀಡಲು ನಿರ್ಧರಿಸಿದ್ದು, ಅದನ್ನು 7 ದಿನಕ್ಕೆ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಬರುತ್ತಿರುವ ಹಾಲನ್ನು ತಪಾಸಣೆ ಮಾಡುವ ಅಧಿಕಾರ ಮಹಾನಗರ ಪಾಲಿಕೆಗೆ ಇದ್ದು, ಅದನ್ನು ಕೆಎಂಎಫ್‌ಗೆ ನೀಡುವಂತೆ ಮನವಿ ಮಾ‌ಡಿದ ಅವರು, ಕೆಎಂಎಫ್ ಮಳಿಗೆಗಳು ಕೆಲವರ ಹಿ‌ಡಿತದಲ್ಲಿದೆ, ಅದು ಸಾರ್ವಜನಿಕರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, 2018ರ ವೇಳೆಗೆ 100 ತಾಲೂಕುಗಳಲ್ಲಿ ಹಗಲಿನ ವೇಳೆ ರೈತರಿಗೆ ವಿದ್ಯುತ್ ನೀ‌ಡಲು ನಿರ್ಧರಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಟ್ರಾನ್ಸಫಾರ್ಮ್ ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಎಸ್. ಮಹದೇವಪ್ರಸಾದ್, ಸಾಂಸದ ಡಿ.ಕೆ. ಸುರೇಶ್, ಕೆಎಂಎಫ್ ಅಧ್ಯಕ್ಷ ನಾಗರಾಜ್, ಬಮೂಲ್ ಅಧ್ಯಕ್ಷ ಕೆ. ರಮೇಶ್ ಸೇರಿದಂತೆ ಶಾಸಕರು, ಒಕ್ಕೂಟದ ನಿರ್ದೇಶಕರು ಹಾಜರಿದ್ದರು.

Comments are closed.