ಬೆಂಗಳೂರು: ಸಚಿವ ಸಂಪುಟ ಪುನಾರಚನೆ ನಂತರ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದರೆ, ಮತ್ತೊಂದೆಡೆ (ಬಿಜೆಪಿ ಭಿನ್ನಮತ ತೀವ್ರ?) ಜಿಲ್ಲಾ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದಕ್ಕೆ ನಿರೀಕ್ಷೆಯಂತೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಬಂಡಾಯದ ಕಹಳೆ ಮೊಳಗಿದೆ.
ಮಂಗಳವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ಮುಖಂಡರು ಬಿಎಸ್ ವೈ ವಿರುದ್ಧ ಸಭೆ ನಡೆಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಹಸ್ತಕ್ಷೇಪದ ಬಗ್ಗೆ ಬಿಜೆಪಿ ಅತೃಪ್ತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಗೆ ವಿವಿಧ ಜಿಲ್ಲೆಗಳಿಂದ ಅತೃಪ್ತ ಬಿಜೆಪಿ ಮುಖಂಡರು ಆಗಮಿಸಿದ್ದರು. ಸಭೆಯಲ್ಲಿ ಕೆಎಸ್ ಈಶ್ವರಪ್ಪ, ಸಿಟಿ ರವಿ, ಅರವಿಂದ ಲಿಂಬಾವಳಿ, ಸೊಗಡು ಶಿವಣ್ಣ, ಅಶ್ವತ್ಥ ನಾರಾಯಣ, ಬೆಳ್ಳುಬ್ಬಿ, ಭಾನುಪ್ರಕಾಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕೆಜೆಪಿಯಿಂದ ವಲಸೆ ಬಂದಿರುವ ಮುಖಂಡರು ಹಾಗೂ ಕಾರ್ಯಕರ್ತರಿಗೆ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳಲ್ಲಿ ಯಡಿಯೂರಪ್ಪನವರು ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಈ ಬಗ್ಗೆ ಸಮಾಲೋಚನೆ ನಡೆಸಿ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ಕೆಲವು ಗೊಂದಲಗಳಾಗಿವೆ. ಹಾಗಾಗಿ ಇಂದಿನ ಸಭೆಯಲ್ಲಿ ಗೊಂದಲಗಳ ಬಗ್ಗೆ ಚರ್ಚೆ ನಡೆಸಿ ಸಂಘ ಪರಿವಾರ, ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದರು.
ಬಿಎಸ್ ವೈ ನಾಯಕತ್ವಕ್ಕೆ ವಿರೋಧವಿಲ್ಲ: ಆರೋಪ
ಯಾವ ಸಂದರ್ಭದಲ್ಲೂ ಹೋದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಮ್ಮ ಕೈಗೆ ಸಿಗುತ್ತಿಲ್ಲ. ಸಿಕ್ಕಿದರೂ ಮೇಡಂ(ಶೋಭಾ ಕರಂದ್ಲಾಜೆ) ಹತ್ತಿರ ಮಾತಾಡಿ ಎಂದು ಹೇಳಿ ಹೋಗುತ್ತಾರೆ ಎಂದು ಬಿಜೆಪಿ ಮುಖಂಡರು ಸಭೆಯಲ್ಲಿ ದೂರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಚುನಾವಣೆ ಸೋತ ಮಾತ್ರಕ್ಕೆ ನಾವೇನು ನಾಯಕರಲ್ವಾ? ನಿಮ್ಮೆಲ್ಲರ ಕಚ್ಚಾಟದಿಂದಾಗಿ ನಾವೆಲ್ಲ ಸೋಲಬೇಕಾಯಿತು. ನಾವೆಲ್ಲ ಚುನಾವಣೆಯಲ್ಲಿ ಸೋಲಲು ನೀವೂ ಕಾರಣರಲ್ಲವೇ? ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾಗಲು ನಮ್ಮ ಆಕ್ಷೇಪ ಇಲ್ಲ. ಸಂಘಟನೆಯ ಹಿನ್ನೆಲೆ ಇಲ್ಲದವರಿಗೆ ಸ್ಥಾನ ನೀಡಬಾರದು. ಹಾಗಾಗಿ ಬಿಎಸ್ ವೈ ಬೆಂಬಲಿಗರಿಂದ ಆಗುತ್ತಿರುವ ವ್ಯತ್ಯಾಸ ಸರಿಪಡಿಸಿ. ನಮ್ಮನ್ನು ನೇಮಕ ಮಾಡಲಾಗಲ್ಲ ಎಂದರೆ ಅದಕ್ಕೆ ಕಾರಣ ತಿಳಿಸಬೇಕು ಎಂದು ಬಿಜೆಪಿ ಸಭೆಯಲ್ಲಿ ಮಾಜಿ ಶಾಸಕರು, ಮಾಜಿ ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಿಎಸ್ ವೈ ಜೊತೆ ಒಂದು ಸುತ್ತಿನ ಮಾತುಕತೆಗೆ ನಿರ್ಧಾರ
ನೇಮಕ ಆಗಿರುವ ಪದಾಧಿಕಾರಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ ಅತೃಪ್ತರ ಸಭೆಯಲ್ಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚಿಸುವುದಾಗಿ ಈಶ್ವರಪ್ಪ ಭರವಸೆ ನೀಡಿದರು. ಅಲ್ಲದೇ ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳಿಧರ್ ಅವರಿಗೂ ವರದಿ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಈಶ್ವರಪ್ಪ ವಿರುದ್ಧವೂ ಅಸಮಾಧಾನ!
ಸಭೆ ಕರೆದು ಅನಾವಶ್ಯಕ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿಸುತ್ತಿದ್ದೀರಿ. ನಿಮ್ಮ ವೈಯಕ್ತಿಕ ಲಾಭಕ್ಕೆ ಕಾರ್ಯಕರ್ತರನ್ನು ಬಲಿಕೊಡಬೇಡಿ ಎಂದು ಬಿಜೆಪಿ ಜಿಲ್ಲಾ ಮುಖಂಡರು ಈಶ್ವರಪ್ಪ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಬಿಎಸ್ ವೈ ನಮ್ಮ ನಾಯಕರು ಆದರೆ ಅವರನ್ನು ಮತ್ಯಾರೋ ನಿಯಂತ್ರಿಸುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿಸುವುದರಿಂದ ಪಕ್ಷಕ್ಕೆ ನಷ್ಟ ಹೊರತು ನಮಗಲ್ಲ. ಮುಗಿದು ಹೋದ ಅಧ್ಯಾಯ ಕೆದಕುತ್ತಿದ್ದೀರಿ ಎಂದು ಮುಖಂಡರು ಪ್ರಶ್ನಿಸಿದರು.
-ಉದಯವಾಣಿ
Comments are closed.