
ಕೊಳೆಯುತ್ತಿರುವ ಈರುಳ್ಳಿ ಪ್ರದರ್ಶಿಸಿದ ವಿಜಯಪುರ ತಾಲ್ಲೂಕು ಉಪ್ಪಲದಿನ್ನಿ ಗ್ರಾಮದ ಶ್ರೀಶೈಲ ಗಾಣಿಗೇರ.
ವಿಜಯಪುರ: ಕಾರಹುಣ್ಣಿಮೆಯ ಬಳಿಕ ಈರುಳ್ಳಿ ದರ ಹೆಚ್ಚಾಗಬಹುದು ಎಂದು ಕಾದು ಕುಳಿತಿದ್ದ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಮೂರು ತಿಂಗಳಿಂದ ದಾಸ್ತಾನಿಟ್ಟಿದ್ದ ಈರುಳ್ಳಿ ಕೊಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ದರ ಪಾತಾಳಕ್ಕಿಳಿದಿದೆ.
ಆಗ್ಗಿಂದಾಗ್ಗೆ ಸುರಿಯುತ್ತಿರುವ ಮಳೆಗೆ ಇಲಾರಗಿ (ಬಯಲು ಪ್ರದೇಶದಲ್ಲಿ ಈರುಳ್ಳಿ ಸಂಗ್ರಹಿಸುವ ವ್ಯವಸ್ಥೆ)ಯಲ್ಲಿನ ಉಳ್ಳಾಗಡ್ಡಿ ತೋಯ್ದು ಮತ್ತಷ್ಟು ಹಾಳಾಗುತ್ತಿದೆ. ಇತ್ತ ಮಾರುವಂತೆಯೂ ಇಲ್ಲ. ಅತ್ತ ದಾಸ್ತಾನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಅತಂತ್ರ ಪರಿಸ್ಥಿತಿ ಜಿಲ್ಲೆಯಲ್ಲಿನಿರ್ಮಾಣಗೊಂಡಿದೆ.
‘ಏನ್ ಮಾಡ್‍ಬೇಕ್ ಅನ್ನೋದ ತಿಳೀವಲ್ದರಿ. ಇದು ಒಬ್ರ, ಇಬ್ರ ಸಮಸ್ಯೆ ಅಲ್ಲ. ಎಲ್ಲಾರದೂ ಇದ… ಹಾಡ’ ಎಂದು ಈರುಳ್ಳಿ ಬೆಳೆಗಾರರ ಅಸಹಾಯಕತೆಯನ್ನು ತಾಲ್ಲೂಕಿನ ಉಪ್ಪಲದಿನ್ನಿಯ ಪ್ರಗತಿಪರ ರೈತ ಸೋಮನಾಥ ಶಿವನಗೌಡ ಬಿರಾದಾರ ವಿವರಿಸುತ್ತಾರೆ.
ಸೋಮನಾಥ ಅವರು ಹೇಳುವಂತೆ, ಅವರು ಪ್ರತಿ ವರ್ಷ ಬೇಸಿಗೆಯಲ್ಲಿ 22 ಎಕರೆಯಲ್ಲಿ ಈರುಳ್ಳಿ ಬೆಳೆಯುತ್ತಿದ್ದರು. ಈ ಬಾರಿ ಬರ ಪರಿಸ್ಥಿತಿಯಿಂದ 10 ಎಕರೆಯಲ್ಲಿ ಮಾತ್ರ ಬೆಳೆದಿದ್ದರು. ಅದಕ್ಕಾಗಿ ಅವರು ಖರ್ಚು ಮಾಡಿದ್ದು ₹ 2.5 ಲಕ್ಷ. ನೀರಿನ ಅಭಾವ ಕಾಡಿದ್ದರಿಂದ ₹ 4.5 ಲಕ್ಷ ವ್ಯಯಿಸಿ ಬಾವಿ ತೋಡಿಸಿದ್ದರು. ಇದರಿಂದಾಗಿ ಅವರಿಗೆ 80 ಟನ್ ಉಳ್ಳಾಗಡ್ಡಿ ಸಿಕ್ಕಿತ್ತು. ಮಾರುಕಟ್ಟೆಯಲ್ಲಿ ಇದ್ದ ದರ ಪ್ರತಿ ಕ್ವಿಂಟಲ್‌ಗೆ ₹ 500–600. ಮೂರು ತಿಂಗಳು ಕಾದರೂ ದರ ಹೆಚ್ಚಲಿಲ್ಲ.
ನೀರಿನ ಅಭಾವದಿಂದ ಗುಣಮಟ್ಟದ ಈರುಳ್ಳಿಯೂ, ಇಳುವರಿಯೂ ಹೆಚ್ಚಿಗೆ ಸಿಗಲಿಲ್ಲ. ವಾರದೊಳಗೆ ಮಾರದಿದ್ದರೆ ಇರುವ ದಾಸ್ತಾನು ಕೊಳೆತು ಹೋಗುತ್ತದೆ. ಮಾರಿದರೆ ಖರ್ಚೂ ಕೈಗೆ ಮರಳದು. ಇನ್ನಷ್ಟು ದಿನ ಶೈತ್ಯಾಗಾರದಲ್ಲಿಟ್ಟು ಕಾಪಿಡೋಣ ಎಂದರೂ ಅವರ ಬಳಿ ಹಣವಿಲ್ಲ. ಹೀಗಾಗಿ ಅವರು ತಮಿಳುನಾಡಿನ ರಫ್ತು ವ್ಯಾಪಾರಿಗಳನ್ನೂ ಸಂಪರ್ಕಿಸಿದರು.
ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ಸುಂಕ ಹೇರಿದೆ. ಆದ್ದರಿಂದ ಮಾರಾಟ ನಡೆಸುತ್ತಿಲ್ಲ ಎಂಬ ಉತ್ತರ ಬಂತು.ಇತ್ತ ಮಹಾರಾಷ್ಟ್ರದಲ್ಲೂ ನಿರೀಕ್ಷೆಗೆ ಮೀರಿ ಬೆಳೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ದರ ಹೆಚ್ಚಾಗುವ ನಿರೀಕ್ಷೆ ಇಲ್ಲ ಎನ್ನುವ ಸೋಮನಾಥ, ಸದ್ಯ ಬೇರಾವುದೂ ದಾರಿ ಕಾಣದೇ ಕುಳಿತಿದ್ದಾರೆ.
‘ಕೇಂದ್ರ ಸರ್ಕಾರ ಮಹಾರಾಷ್ಟ್ರದಲ್ಲಿ ಖರೀದಿ ಕೇಂದ್ರ ತೆರೆಯುವ ಮೂಲಕ ಬೆಂಬಲ ಬೆಲೆಯಡಿ ಉಳ್ಳಾಗಡ್ಡಿ ಖರೀದಿಸುತ್ತಿದೆ. ಇದೇ ರೀತಿ ನಮ್ಮಲ್ಲೂ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಬಹಳ ತೊಂದರೆಯಾಗುತ್ತದೆ. ಮುಂಗಾರು ಬೇಸಾಯ ನಡೆಸಲು ಕಷ್ಟ. ದರ ಕುಸಿತಕ್ಕೆ ಕಂಗೆಟ್ಟು ಈ ವರ್ಷದ ಶುಭ ಸಮಾರಂಭಗಳನ್ನು ಮುಂದೂಡಿದ್ದೇವೆ’ ಎನ್ನುತ್ತಾರೆ ಮತ್ತೊಬ್ಬ ಬೆಳೆಗಾರ ಹನುಮಂತ ಬಸಪ್ಪ ಕುರುಬರ.
ಜಿಲ್ಲೆಗೆ ಮೂರನೇ ಸ್ಥಾನ: ‘ವಿಜಯಪುರ ಜಿಲ್ಲೆ ಈರುಳ್ಳಿ ಬೆಳೆಯುವುದರಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ. ಬೇಸಿಗೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ನಡೆದಿತ್ತು. ತೀವ್ರ ಸಂಕಷ್ಟದ ನಡುವೆಯೂ ನೀರಾವರಿ ಆಸರೆಯಲ್ಲಿ ರೈತರು ಫಸಲು ಪಡೆದಿದ್ದಾರೆ. ಉತ್ತಮ ದರದ ನಿರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾವೇ ನಿರ್ಮಿಸಿಕೊಳ್ಳುವ ಇಲಾರಗಿಗಳಲ್ಲಿ ಇಟ್ಟುಕೊಂಡು ಕಾಯುತ್ತಿದ್ದಾರೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಂದಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮಲ್ಲೂ ತೆಲಗಿ ತಳಿಯ ಉಳ್ಳಾಗಡ್ಡಿ ನಿರೀಕ್ಷೆಗೂ ಹೆಚ್ಚು ಪ್ರಮಾಣದಲ್ಲಿ ಬೆಳೆದಿದ್ದರಿಂದ, ಜತೆಗೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಬೆಳೆ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ದರ ಕುಸಿತಗೊಂಡಿದೆ. ಫಸಲು ಕೊಳೆಯುತ್ತಿರುವುದರಿಂದ ಮಾರಾಟ ಮಾಡಬೇಕಾದ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದೆ’ ಎಂದು ಅವರು ಹೇಳುತ್ತಾರೆ.
** *** **
ಉಳ್ಳಾಗಡ್ಡಿ ಭಾಳ ತ್ರಾಸ್ ಮಾಡಾಕತ್ತೈತ್ರಿ. ಇಲಾರಗಿ ಒಳಗ ಕೊಳ್ಯಾಕತೈತ್ರಿ. ವಾರದೊಳಗನ ಮಾರಬೇಕು. ಮಾರ್ಕೆಟ್‌ನಾಗೂ ರೇಟ್ ಇಲ್ಲ. ಸರ್ಕಾರ ನೆರವಿಗೆ ಬರ್‍ಬೇಕು.
-ಶ್ರೀಶೈಲ ಗಾಣಿಗೇರ, ಉಪ್ಪಲದಿನ್ನಿ ರೈತ
Comments are closed.