ದಾವಣಗೆರೆ/ತುಮಕೂರು/ಹಾಸನ,ಜೂ.೨೭-ಅಡಿಕೆ, ತೆಂಗು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕನ್ನಡ ಜನಪರ ಸಂಘಟನೆಗಳು, ಜಿಲ್ಲಾ ಅಡಕೆ ಬೆಳೆಗಾರರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳು ದಾವಣಗೆರೆ, ತುಮಕೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಬಂದ್ ಕರೆ ನೀಡಿದ್ದು, ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು ಬೆಳಗಿನ ಜಾವ ೫ ಗಂಟೆ ಸಮಯದಲ್ಲಿ ದಾವಣಗೆರೆ ಜಯದೇವ ವೃತ್ತ ಮತ್ತು ಗಾಂಧಿವೃತ್ತದಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚುವ ಮೂಲಕ ರೈತರು ಪ್ರತಿಭಟನೆ ಆರಂಭಿಸಿದರು. ನಂತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರೈತರು ಬೈಕ್ ಜಾಥಾ ನಡೆಸಿದರು. ಬೆಳಗಿನಿಂದಲೇ ನಗರದಲ್ಲಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರ, ನಗರ ಸಾರಿಗೆ, ಆಟೋ ಸಂಚಾರ ಸೇರಿದಂತೆ ಮತ್ತಿತರ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ, ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು.
ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಅಗತ್ಯ ಸೌಲಭ್ಯಗಳನ್ನು ಹೊರತು ಪಡಿಸಿ, ಬಹುತೇಕ ವ್ಯಾಪಾರ-ವಹಿವಾಟುಗಳು ಬಂದ್ ಆಗಿದ್ದವು.
ಅಡಿಕೆ ಬೆಲೆ ಒಂದು ಕ್ವಿಂಟಾಲ್ಗೆ ೯೫ ಸಾವಿರದಿಂದ ೨೦ ಸಾವಿರಕ್ಕೆ ಕುಸಿದಿದೆ. ಒಂದು ಎಕರೆ ಅಡಿಕೆ ಬೆಳೆಯಲು ಪ್ರತಿ ವರ್ಷ ೨೦ರಿಂದ ೩೫ಸಾವಿರ ಖರ್ಚಾಗುತ್ತದೆ. ಇದರಿಂದ ಅಡಿಕೆ ಬೆಳೆಗಾರರಿಗೆ ತೀವ್ರ ನಷ್ಟ ಸಂಭವಿಸಿದೆ. ಸಾರ್ಕ್ ಒಪ್ಪಂದದಂತೆ ಹೊರದೇಶಗಳಿಂದ ಅಡಿಕೆ ಆಮದಿಗೆ ಕೇಂದ್ರ ಅವಕಾಶ ನೀಡಿರುವುದರಿಂದ ಅಡಿಕೆ ಬೆಲೆ ಕುಸಿದಿದೆ ಎಂದು ರೈತರು ಆರೋಪಿಸಿದರು.
ಕೇಂದ್ರ ಸರ್ಕಾರ ಕೂಡಲೇ ಅಡಿಕೆ ಆಮದು ನಿಲ್ಲಿಸಬೇಕು. ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು. ಒಣಗಿದ ಅಡಿಕೆ ಮರಗಳಿಗೆ ಮತ್ತು ಇಳುವರಿ ಕುಸಿತ ಹಾನಿಗೆ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ತೆಂಗಿನ ಬೆಲೆಯನ್ನು ಒಂದಕ್ಕೆ ೩೦ರಿಂದ ೪೦ಕ್ಕೆ ಘೋಷಣೆ ಮಾಡಿ ಸರ್ಕಾರ ಖರೀದಿಸಬೇಕು ಎಂಬುದು ರೈತರ ಬೇಡಿಕೆಗಳಾಗಿವೆ.
ಬಹುದಿನದ ಬೇಡಿಕೆ ಇದಾಗಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಇಂದು ನಾನಾ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಅಡಿಕೆ, ತೆಂಗು ಬೆಲೆ ಇಳಿಕೆ ಖಂಡಿಸಿ ಇಂದು ಕರೆ ನೀಡಲಾಗಿದ್ದ ತುಮಕೂರು ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಎಂ.ಜಿ.ರಸ್ತೆ, ಬಿ.ಹೆಚ್.ರಸ್ತೆ, ಅಶೋಕ ರಸ್ತೆಗಳಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಬೆಳಗ್ಗೆ ೯.೩೦ರ ನಂತರ ರೈತ ಸಂಘಟನೆಯ ಕಾಯಕರ್ತರು ಎಲ್ಲಾ ರಸ್ತೆಗಳಲ್ಲೂ ಪ್ರತಿಭಟನಾ ಮೆರವಣಿಗೆ ತೆರಳಿ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ವರ್ತಕರಲ್ಲಿ ಮನವಿ ಮಾಡಿದ ಮೇರೆಗೆ ವರ್ತಕರು ವ್ಯಾಪಾರ ವಹಿವಾಟು ಬಂದ್ ಮಾಡಿದರು.
ಇನ್ನುಳಿದಂತೆ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ನಗರದ ಪುರಭವನ ವೃತ್ತದಲ್ಲಿ ಜಮಾಯಿಸಿದ ನೂರಾರು ರೈರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಿದರು.
ತಿಪಟೂರಿನಲ್ಲೂ ಬಂದ್:
ಜಿಲ್ಲೆಯ ತಿಪಟೂರಿನಲ್ಲೂ ಸಹ ರೈತ ಸಂಘಟನೆ ಕರೆ ನೀಡಿದ್ದ ಬಂದ್ಗೆ ಜೆಡಿಯು ಬೆಂಬಲ ವ್ಯಕ್ತಪಡಿಸಿತ್ತು. ಕೊಬ್ಬರಿ ಧಾರಣೆ ಕುಸಿದಿರುವುದರಿಂದ ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಕನಿಷ್ಠ ೨೦ ಸಾವಿರ ರೂ. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಮುಂದಾಗಬೇಕು. ಆನ್ಲೈನ್ ವ್ಯಾಪಾರ ಮತ್ತು ಇ ಪೇಮೆಂಟ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಅಕ್ರಮ ಕೊಬ್ಬರಿ ವಹಿವಾಟಿಗೆ ತಡೆಯೊಡ್ಡಬೇಕು. ಎಲ್ಲಾ ಕೊಬ್ಬರಿ ವಹಿವಾಟು ಎಪಿಎಂಸಿ ಮೂಲಕ ಅಧಿಕೃತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಾಸನದಲ್ಲೂ ಭಾಗಶಃ ಬಂದ್:
ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರೈತ ಸಂಘಟನೆ ನೀಡಿದ್ದ ಹಾಸನ ಬಂದ್ ಭಾಗಶಃ ಯಶಸ್ವಿಯಾಗಿದೆ. ನಗರದ ನಾನಾ ಭಾಗಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ವಾಹನ ಸಂಚಾರ ಎಂದಿನಂತಿವೆ.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ, ಜಿಲ್ಲಾಧಿಕಾರಿಗಳ ಕಚೇರಿಯ ಆವರಣಕ್ಕೆ ಆಗಮಿಸಿ ಧರಣಿ ನಡೆಸಿದರು.
ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ರೈತಸಂಘ, ಹಸಿರು ಸೇನೆ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ಘೋಷಣೆ ಹಾಕಿದರು. ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಉಳಿದಂತೆ ಶಿವಮೊಗ್ಗ, ದಕ್ಷಿಣ ಕನ್ನಡ.. ಸೇರಿದಂತೆ ನಾನಾ ಜಿಲ್ಲೆಗಳಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Comments are closed.