ಕರ್ನಾಟಕ

ಹಳ್ಳಿಗೆ ಹೊರಡಿ : ಜನರ ಕಷ್ಟ ಸುಖ ವಿಚಾರಿಸಲು ಜೇಭದ್ರ ಅಧಿಕಾರಿಗಳಿಗೆ ಸಿಎಂ ತಾಕೀತು

Pinterest LinkedIn Tumblr

cm

ಬೆಂಗಳೂರು, ಜೂ. ೨೭- ಜಿಲ್ಲಾಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವುದನ್ನು ಬಿಟ್ಟು ಹಳ್ಳಿಗಳಿಗೆ ಹೋಗಿ ಜನರ ಕಷ್ಟ-ಸುಖ ಆಲಿಸಬೇಕು. ಅವರ ಸಮಸ್ಯೆಗಳನ್ನು ಅರಿತು ಕೂಡಲೇ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಈ ನಿಟ್ಟಿನಲ್ಲಿ ಕರ್ತವ್ಯಲೋಪ ಎಸಗಿದರೆ, ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಲ್ಲಿ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳಾದವರು ನಾಲ್ಕು ಗೋಡೆಗಳ ಮಧ್ಯೆ ಕುಳಿತರೆ, ನಿಮ್ಮ ಅಧೀನ ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಶ್ರೀಸಾಮಾನ್ಯರ ಕಷ್ಟ-ಸುಖ ಕೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ನೀವೇ ಹಳ್ಳಿಗಳಿಗೆ ಹೋಗಬೇಕು, ಆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿರುವ ಎರಡು ದಿನಗಳ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ಜಿಲ್ಲೆಯಲ್ಲಿ ನ್ಯೂನ್ಯತೆಗಳಾದರೆ, ಸಂಬಂಧಪಟ್ಟ ಆಯಾ ಜಿಲ್ಲಾಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುವುದು. ನೀವೇ ಅದಕ್ಕೆ ಉತ್ತರಿಸಬೇಕಾಗುತ್ತದೆ, ನೀವು ಸಮರ್ಪಕವಾಗಿ ನಿಮ್ಮ ಕರ್ತವ್ಯವನ್ನು ನಿಭಾಯಿಸದಿದ್ದಲ್ಲಿ ಜನರ ಶಾಪಕ್ಕೆ ಗುರಿಯಾಗುತ್ತೀರಿ ಎಂದವರು ಖಾರವಾಗಿ ನುಡಿದರು.
ನಿಮಗೇನು ದಾಡಿ
ಬ್ರಿಟಿಷರ ಆಡಳಿತದ ಕಾಲದಲ್ಲಿ ಜಿಲ್ಲಾಧಿಕಾರಿಗಳನ್ನು `ಅಮಲ್ದಾರರು’ ಎಂದು ಕರೆಯಲಾಗುತ್ತಿತ್ತು. ಆಗಿನ ಸಂದರ್ಭದಲ್ಲಿ ರಸ್ತೆಗಳು ಸರಿಯಿಲ್ಲದ ಕಾರಣ ಅಮಲ್ದಾರರು ಕುದುರೆಗಳ ಮೇಲೆ ಕುಳಿತು ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಪರಿಹಾರವನ್ನೂ ಸೂಚಿಸುತ್ತಿದ್ದರು. ಆದರೆ ಈಗ ಎಲ್ಲಾ ಕಡೆ ಉತ್ತಮವಾದ ರಸ್ತೆಗಳಿವೆ. ನಿಮಗೆ ಕಾರು-ಗೀರು ಮುಂತಾದ ಸೌಲಭ್ಯಗಳಿವೆ. ಆದರೂ ಹಳ್ಳಿಗಳಿಗೆ ಹೋಗಲಿಕ್ಕೆ ನಿಮಗೇನು ದಾಡಿ? ಎಂದು ಸಿದ್ದರಾಮಯ್ಯ ಅವರು ತುಸು ಕೋಪದಿಂದಲೇ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಡಳಿತ ದಕ್ಷತೆಯಿಂದ ಕೆಲಸ ಮಾಡಿದರೆ, ಅಲ್ಲಿನ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿವೆ. ಅದನ್ನು ಬಿಟ್ಟು ಕಚೇರಿಗಳಲ್ಲಿ ಕುಳಿತರೆ, ಜನರ ಕಷ್ಟ-ಸುಖ ಪರಿಹಾರವಾಗುವುದಾದರೂ ಹೇಗೆ? ಎಂದರು.
ನಾವು 5 ವರ್ಷಕ್ಕೊಮ್ಮೆ ಚುನಾವಣೆ ಎದುರಿಸಲು ಜನರ ಬಳಿಗೆ ಹೋಗುತ್ತೇವೆ. ಜಿಲ್ಲಾಡಳಿತ ಮಾಡುವ ತಪ್ಪುಗಳನ್ನು ಮುಂದಿಟ್ಟುಕೊಂಡು ನಮ್ಮನ್ನು ಪ್ರಶ್ನಿಸುತ್ತಾರೆ, ಅಂತಹ ಪರಿಸ್ಥಿತಿ ಬರದಂತೆ ನೀವು ಈಗಿನಿಂದಲೇ ಕೆಲಸ ಮಾಡಬೇಕು. ನಿಮ್ಮ ಬಳಿ ಬರುವ ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಫರ್ಮಾನು ಹೊರಡಿಸಿದರು.
ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು, ಸರ್ಕಾರಿ ಶಾಲೆ, ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಭೇಟಿ ಕೊಡಬೇಕು. ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಬೇಕು, ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಎಂತಹ ಊಟ ಕೊಡಲಾಗುತ್ತದೆ ಎಂಬುದನ್ನು ಖುದ್ದಾಗಿ ಪರಿಶೀಲಿಸಬೇಕು. ನೀವು ಹೋಗಿ ಪರಿಶೀಲನೆ ಮಾಡದಿದ್ದರೆ, ವಿದ್ಯಾರ್ಥಿಗಳ ಕಷ್ಟ – ಸುಖ ಹೇಗೆ ತಿಳಿಯುತ್ತದೆ? ಸರ್ಕಾರ ಕೋಟ್ಯಾಂತರ ರೂ. ಖರ್ಚು ಮಾಡಿ ವಿದ್ಯಾರ್ಥಿಗಳ ಹಿತರಕ್ಷಣೆಗೆ ಮುಂದಾಗಿದ್ದೇವೆ. ಇದನ್ನು ನೀವು ನಿಗಾ ವಹಿಸಬೇಕು ಎಂದರು.
ಪ್ರತಿಯೊಂದು ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಏನೇನು ಆಹಾರ ಕೊಡಲಾಗುತ್ತದೆ ಎನ್ನುವ ಪಟ್ಟಿ (ಮೆನು)ಯನ್ನು ಹಾಕಬೇಕು. ಈಗ ಎಷ್ಟು ಹಾಸ್ಟೆಲ್‌ಗಳಲ್ಲಿ ಇಂತಹ ಪಟ್ಟಿ ಹಾಕಲಾಗಿದೆ? ನಿಮಗೆಷ್ಟು ಗೊತ್ತಿದೆ ಎಂದು ಅವರು ಪ್ರಶ್ನಿಸಿದರು.
ರಾಜ್ಯ ಸರ್ಕಾರ ದೀಲದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮುಂತಾದ ಶೋಷಿತ ಸಮುದಾಯಗಳಿಗೆ ಆರ್ಥಿಕ ಶಕ್ತಿ ತುಂಬಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಅದರ ಲಾಭ ಫಲಾನುಭವಿಗಳಿಗೆ ಸಿಗುವಂತೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯ. ಯೋಜನೆಗಳಿಗೆ ಬಿಡುಗಡೆ ಮಾಡಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ವೈಫಲ್ಯಗಳಾದರೆ, ಸಹಿಸಲಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ನುಡಿದರು.
ಸಾರ್ವಜನಿಕರ ಅಸಹನೆ
ಕೆಲವು ಅಧಿಕಾರಿಗಳು ತಮ್ಮ ಬಳಿಗೆ ಬರುವ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಬದಲು ಅನಗತ್ಯವಾಗಿ ಕೊಕ್ಕೆ ಹಾಕುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದು ಸಾರ್ವಜನಿಕರ ಅಸಹನೆಗೆ ಕಾರಣವಾಗಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಿದರೆ, ಜನರು ಪದೇಪದೇ ಕಚೇರಿಗಳಿಗೆ ಎಡತಾಕುವುದು ತಪ್ಪುತ್ತದೆ ಎಂದರು.
ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಗೋಮಾಳ ಸೇರಿದಂತೆ, ಸರ್ಕಾರಿ ಜಮೀನುಗಳ ಮಾಹಿತಿ ಫಲಕವನ್ನು ಹಾಕಬೇಕು. ನಿಮ್ಮ ಪೈಕಿ ಎಷ್ಟು ಮಂದಿ ಈ ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ ಅವರು, ಈ ತರಹದ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಕಟ್ಟಾಜ್ಞೆ ಹೊರಡಿಸಿದರು.
ಸಮಾವೇಶದಲ್ಲಿ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು, ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ವಿವಿಧ ಇಲಾಖೆಗಳ ಪ್ರದಾನ ಕಾರ್ಯದರ್ಶಿಗಳು ಸೇರಿದಂತೆ, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

Comments are closed.