ಕರ್ನಾಟಕ

39 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಮೋಸ್ಟ್ ವಾಂಟೆಡ್ ಬೈಕ್ ಕೊನೆಗೂ ಸಿಕ್ತು !

Pinterest LinkedIn Tumblr

bike

ಬೆಂಗಳೂರು: ಸುಮಾರು 39 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ದ್ವಿಚಕ್ರ ವಾಹನವೊಂದು 40 ನೇ ಬಾರಿಗೆ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ.

ಕೆಲವು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದಾಗ ಸವಾರರು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಈ ವೇಳೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ಅದಾದ ನಂತರವೂ ಸಿಗ್ನಲ್ ಜಂಪ್ ಮತ್ತು ಹೆಲ್ಮೆಟ್ ಇಲ್ಲದೇ ಸವಾರರು ಪ್ರಯಾಣ ಮಾಡುತ್ತಾರೆ. ಈ ಎಲ್ಲಾ ದೃಷ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ.

ಕಳೆದ ವಾರಿ ಸಂಚಾರಿ ಪೊಲೀಸರು ತಮ್ಮ ಕೆಲಸಕ್ಕಾಗಿ ಯಲಹಂಕ ಬಳಿ ಹೋಗುತ್ತಿದ್ದರು. ಈ ವೇಳೆ KA-05 H L645 ದ್ವಿಚಕ್ರ ವಾಹನದಲ್ಲಿ ಸವಾರ ಹೆಲ್ಮೆಟ್ ಇಲ್ಲದೇ ಚಲಿಸುತ್ತಿದ್ದ, ತಕ್ಷಣವೇ ಪೊಲೀಸರು ಆತನನ್ನು ತಡೆದರು, ಈ ವೇಳೆ ಸಂಚಾರಿ ಪೊಲೀಸರಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ನಗರ ಸಂಚಾರಿ ಪೊಲೀಸರಿಗೆ ಬೇಕಾಗಿದ್ದ ಬೈಕ್ ಅದಾಗಿತ್ತು.

ಪೊಲೀಸರು ಆ ವಾಹನದ ನಂಬರ್ ಅನ್ನು ತಮ್ಮ ಮೊಬೈಲ್ ಗೆ ಹಾಕಿ ಪರಿಶೀಲಿಸಿದಾಗ ಅವರಿಗೆ ಆಘಾತವಾಗಿತ್ತು. ಸುಮಾರು 39 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕೀರ್ತಿ ಆ ದ್ವಿಚಕ್ರ ವಾಹನಕ್ಕಿತ್ತು.

ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಮಲ್ಲೇನಹಳ್ಳಿಯ ರಘುನಾಥ ಹೆಲ್ಮೆಟ್ ಇಲ್ಲದೇ ಸವಾರಿ ಮಾಡುತ್ತಿದ್ದ ತಪ್ಪಿಗೆ 100 ರು. ದಂಡ ತೆರಲು ಸಿದ್ದರಾಗಿದ್ದರು. ಆದರೆ ಅವರಿಗೆ ಈ ಹಿಂದಿನ ಅಪರಾಧಗಳ ಬಗ್ಗೆ ಮಾಹಿತಿ ಇರಲಿಲ್ಲ. ಪೊಲೀಸರು 4100 ರೂ ನೀಡುವಂತೆ ರಶೀದಿ ನೀಡಿದಾಗ ರಘುನಾಥ್ ಅವರಿಗೆ ಶಾಕ್ ಆಗಿತ್ತು. ಈ ಹಿಂದಿನ ನಿಯಮ ಉಲ್ಲಂಘನೆಗಳ ಬಗ್ಗೆ ಅವರಿಗೆ ಅರಿವಿರಲಿಲ್ಲ.

ಈ ದ್ವಿಚಕ್ರ ವಾಹನ ರಘುನಾಥ್ ಕೆಲಸ ಮಾಡುವ ಖಾಸಗಿ ಸಂಸ್ಥೆಯದ್ದು, ಈ ವಾಹನವನ್ನು ಹಲವು ಮಂದಿ ಉಪಯೋಗಿಸುತ್ತಿದ್ದರು. ಬೈಕ್ ಮಾಲೀಕ ಮನೆ ಬದಲಾಯಿಸಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಕಳುಹಿಸಿರುವ ದಂಡದ ನೋಟೀಸ್ ಅವರಿಗೆ ಸಿಕ್ಲಿಲ್ಲ. ಹೀಗಾಗಿ ರಘುನಾಥ್ ಅವರ ಚಾಲನಾ ಪರವಾನಗಿಯನ್ನು ರದ್ದು ಪಡಿಸಿಲ್ಲ ಎಂದು ಯಲಹಂಕ ಟ್ರಾಫಿಕ್ ಇನ್ಸ್ ಪೆಕ್ಟರ್ ಮೋಹನ್ ಕುಮಾರ್ ತಿಳಿಸಿದ್ದಾರೆ.

ಪೊಲೀಸರು ಹಿಂದಿನ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಮರೆತು ಬಿಟ್ಟಿದ್ದಾರೆ ಎಂದು ನಾಗರಿಕರು ತಿಳಿದಿರುತ್ತಾರೆ. ಆದರೆ ಅದು ಅವರ ತಪ್ಪು ತಿಳುವಳಿಕೆ, ನಾವು ವಾಹನದ ಸಂಖ್ಯೆಯನ್ನು ಪರಿಶೀಲಿಸಿದರೇ ಅದರ ಹಿಂದಿನ ಅಪರಾಧ ಪ್ರಕರಣಗಳೆಲ್ಲಾ ತಿಳಿಯುತ್ತದೆ ಎಂದು ಸಂಚಾರಿ ಪೊಲೀಸ್ ಆಯುಕ್ತ. ಆರ್ ಹಿತೇಂದ್ರ ಹೇಳಿದ್ದಾರೆ.

Comments are closed.