ಬೆಂಗಳೂರು, ಜೂ. ೨೩ – ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನನ್ನ ಬೆನ್ನು ತಟ್ಟಿ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸಂಬಂಧದಲ್ಲಿ ಯಾವುದೇ ಬಿರುಕು ಉಂಟಾಗದಿದ್ದರೆ ತಮ್ಮ ಸಭಾಪತಿ ಸ್ಥಾನ ಅಭಾದಿತ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಇಂದು ಇಲ್ಲಿ ತಿಳಿಸಿದರು.
ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಉಂಟಾಗುವ ಸಾಧ್ಯತೆಗಳು ಇಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನೆರಡು ವರ್ಷ ಸಭಾಪತಿ ಸ್ಥಾನ ಬಿಜೆಪಿ ಕೈತಪ್ಪುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಮುಂದುವರೆಯುವವರೆಗೂ ಈ ಸ್ಥಾನವನ್ನು ಕಿತ್ತುಕೊಳ್ಳಲು ಕಾಂಗ್ರೆಸ್ನವರಿಗೆ ಸಾಧ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.
ದೇವೇಗೌಡರು ಪ್ರತಿ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಾಗ ತಾವು ಅವರನ್ನು ಭೇಟಿ ಮಾಡಿ ಶುಭ ಹಾರೈಸಿ ಅವರ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಲು ಹೋದಾಗ ಸುಮಾರು 45 ನಿಮಿಷ ಮಾತುಕತೆ ನಡೆಯಿತು. ಆ ಸಂದರ್ಭದಲ್ಲಿ `ನಿಮ್ಮ ಸ್ಥಾನಕ್ಕೆ ಏನಾದರೂ ತೊಂದರೆ ಇದೆಯೇ’ ಎಂದು ದೇವೇಗೌಡರು ಪ್ರಶ್ನಿಸಿದರು.
ಸದನದಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸಂಖ್ಯಾ ಬಲ ಕುರಿತು ಅವರ ಮುಂದಿಟ್ಟಾಗ ಬೆನ್ನು ತಟ್ಟಿ ಆಶೀರ್ವದಿಸಿದರು. ಅವರ ಆಶೀರ್ವಾದ ಇರುವ ತನಕ ತಮ್ಮ ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದರು.
ಬಿಜೆಪಿ ಸದಸ್ಯರ ಸಂಖ್ಯೆ 38 ಇದ್ದಾಗ ತಾವು ಬಹುಮತದಿಂದ ಸಭಾಪತಿ ಹುದ್ದೆಗೆ ಆಯ್ಕೆಯಾಗಿದ್ದು, ಆ ನಂತರ ಬಿಜೆಪಿ ಸಂಖ್ಯೆ ಇಳಿಮುಖವಾದಾಗ ಜೆಡಿಎಸ್ ಬೆಂಬಲ ಪಡೆಯಲಾಗಿದೆ. ಪ್ರಸ್ತುತ ಬಿಜೆಪಿ ಸದಸ್ಯರ ಸಂಖ್ಯೆ 23 ಇದೆ. ಸಭಾಪತಿ ಸ್ಥಾನವನ್ನೂ ಪರಿಗಣಿಸಿದರೆ ಸಂಖ್ಯಾಬಲ 24ಕ್ಕೇರಲಿದೆ ಎಂದರು.
ಬಿಜೆಪಿ ಪರವಾಗಿ ಇಬ್ಬರು ಪಕ್ಷೇತರರು ಬೆಂಬಲಕ್ಕಿದ್ದಾರೆ. ಜೆಡಿಎಸ್ 12 ಸದಸ್ಯರನ್ನು ಹೊಂದಿದೆ. ಎರಡೂ ಪಕ್ಷಗಳ ನಾಯಕರ ಒಪ್ಪಂದದಂತೆ ಸಭಾಪತಿ ಹುದ್ದೆ ಬಿಜೆಪಿಗೆ ಉಪಸಭಾಪತಿ ಹುದ್ದೆ ಜೆಡಿಎಸ್ಗೆ ಎಂದು ತೀರ್ಮಾನವಾಗಿದೆ. ಎರಡೂ ಪಕ್ಷಗಳ ಹೊಂದಾಣಿಕೆ ಮುಂದುವರೆದರೆ ಯತಾಸ್ಥಿತಿ ಮುಂದುವರೆಯಲಿದೆ ಎಂದರು.
ಆಡಳಿತಾರೂಢ ಕಾಂಗ್ರೆಸ್ 30 ಸದಸ್ಯರನ್ನು ಹೊಂದಿದೆ, 3 ಮಂದಿ ಪಕ್ಷೇತರರ ಬೆಂಬಲವೂ ಆ ಪಕ್ಷಕ್ಕಿದೆ. ಮೂವರ ಸದಸ್ಯರನ್ನು ನಾಮಕರಣ ಮಾಡಬೇಕಾಗಿದೆ. ಅಷ್ಟಾದರೂ ಇನ್ನೂ ಒಂದು ಸ್ಥಾನ ಖಾಲಿ ಉಳಿದಿದೆ ಎಂದರು. ನನ್ನ ಹಾಗೂ ದೇವೇಗೌಡರ ನಡುವಿನ ಸಂಬಂಧ 4 ದಶಕಗಳದ್ದಾಗಿದೆ ಎಂದರು.
ಕರ್ನಾಟಕ
Comments are closed.