ಹಾಸನ,ಜೂ.೨೩- ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬೆನ್ನಲ್ಲೇ ಅತೃಪ್ತ ನಾಯಕರು
ಬಂಡಾಯವೆದ್ದಿರುವುದರಿಂದ ಉಂಟಾಗಿರುವ ರಾಜಕೀಯ ಬೆಳವಣಿಗೆಯಿಂದ ಯಾವುದೇ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ಪುನರ್ ರಚನೆಯಿಂದಾಗಿ ಕೋಲಾಹಲ ವಾತಾವರಣ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.
ಮಾಜಿ ಸಚಿವರಾದ ಶ್ರೀನಿವಾಸ್ ಪ್ರಸಾದ್, ಅಂಬರೀಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿಲ್ಲ. ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದೇನಷ್ಟೆ. ಸುಖಾಸುಮ್ಮನೆ ವದಂತಿಗಳು ಹರಿದಾಡುತ್ತಿದ್ದು, ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದರು.
ನವೆಂಬರ್ನಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ ಎಂದ ಗೌಡರು, ಜೆಡಿಎಸ್ನಿಂದ ಹೊರ ಹೋಗಿರುವ ಭಿನ್ನಮತೀಯ ಶಾಸಕರ ಕ್ಷೇತ್ರದಲ್ಲಿ ಪರ್ಯಾಯ ನಾಯಕರನ್ನು ನೇಮಿಸಲಾಗುವುದು ಎಂದು ಹೇಳಿದರು.
ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಸಭೆ ಬಳಿಕ ಜುಲೈನಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಜೆಡಿಎಸ್ ಸಮಾವೇಶ ನಡೆಯಲಿದೆ ಎಂದರು.
ಗುಜರಾತ್ ರಾಜ್ಯದಲ್ಲಿ ಪಟೇಲ್ ಸಮುದಾಯ ಪ್ರಬಲವಾಗಿದ್ದು, ಮುಂದೆ ಚುನಾವಣೆ ನಡೆದರೆ, ಬಿಜೆಪಿ ಪಕ್ಷ ಹಿನ್ನಡೆ ಸಾಧಿಸುವುದು ಖಚಿತ ಎಂದರು.
ತೃತೀಯ ರಂಗ ಬಲಪಡಿಸಲು ನಿತೀಶ್ಕುಮಾರ್ ಮತ್ತು ಇತರ ನಾಯಕರು ಹೆಚ್ಚು ಒತ್ತು ನೀಡುತ್ತಿದ್ದು, ಮುಂದೆ ಕೇಂದ್ರದ ವಿರುದ್ಧ ಸೆಡ್ಡು ಹೊಡೆಯಲಿದ್ದಾರೆ ಎಂದು ನುಡಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಹೆಚ್ಚು ಬಲಗೊಳಿಸಲು ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಎಸ್.ಪ್ರಕಾಶ್ ಮತ್ತಿತರರು ಇದ್ದರು.
ಕರ್ನಾಟಕ
Comments are closed.