ಬೆಂಗಳೂರು: ಐವತ್ತಾರು ವರ್ಷದ ತನ್ನ ತಾಯಿಗೆ ಸಂಗಾತಿಯನ್ನು ಹುಡುಕಿದ ಮಗಳು–ಅಳಿಯ, 52 ವರ್ಷದ ಮಗನಿಗೆ (ವಿದುರ) ಹೆಣ್ಣು ನೋಡಿದ ವೃದ್ಧ ದಂಪತಿ..!
‘ಅನುಬಂಧ ಫೌಂಡೇಷನ್’ ಗಾಂಧಿನಗರದ ವೈಷ್ಣವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ವೃದ್ಧರು ಸಂಗಾತಿಯನ್ನು ಹುಡುಕಿಕೊಳ್ಳುವ ‘ಲವ್ ಎಗೇನ್’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.
ಜೀವನದ ಸಂಧ್ಯಾಕಾಲದಲ್ಲಿ ಆಸರೆಗೆಂದು ಒಂದು ಜೀವವನ್ನು ಹುಡುಕುತ್ತಾ ಬಂದವರು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕೆ ಒಡ್ಡಿದರು. ಮಹಿಳೆ, ಪುರುಷ ಎನ್ನುವ ಭೇದಭಾವವಿಲ್ಲದೆ ಹಾಡುಗಾರಿಕೆ ಬಲ್ಲವರು ಜಾನಪದ, ಗೀಗಿಪದ, ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕೆಲವರು ಹಾಸ್ಯದ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಇಳಿ ವಯಸ್ಸಿನಲ್ಲೂ ಜೀವನ ಪ್ರೀತಿಯನ್ನು ಕಾಯ್ದುಕೊಂಡಿದ್ದ ಅವರು, ಈ ಸ್ವಯಂವರದಲ್ಲಿ ಗೆದ್ದು ಬರಬೇಕೆಂಬ ಹಟಕ್ಕೆ ಬಿದ್ದವರಂತೆ ಚೈತನ್ಯಶೀಲರಾಗಿದ್ದರು. ವಯಸ್ಸಾಗಿದೆ, ನಮಗ್ಯಾಕೆ ಈ ಉಸಾಬರಿ ಎನ್ನುವ ಅಂಜಿಕೆ, ಅಳುಕು ಯಾರಲ್ಲೂ ಕಂಡುಬರಲಿಲ್ಲ.
ಪರಸ್ಪರ ಮಾತುಕತೆಗೆ ಅವಕಾಶ: ಸಂಗಾತಿಗಳನ್ನು ಬಯಸಿ ಹೆಸರು ನೋಂದಾಯಿಸಿದ ಮಹಿಳೆಯರು ಹಾಗೂ ಪುರುಷರಿಗೆ ಬ್ಯಾಡ್ಜ್ ನೀಡಲಾಗಿತ್ತು. ಅವರಿಗೆ ಪರಸ್ಪರ ಮಾತುಕತೆ ನಡೆಸಲು ಅವಕಾಶ ನೀಡಲಾಯಿತು. ಒಬ್ಬ ವ್ಯಕ್ತಿ ಎಷ್ಟು ಜನರೊಂದಿಗೆ ಬೇಕಾದರೂ ಮಾತನಾಡಬಹುದಿತ್ತು. ತಮಗೆ ಇಷ್ಟವಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.
ಕೆಲವರು ಸಮಾನ ಮನಸ್ಕರಾದ, ಒಂದೇ ಅಭಿರುಚಿವುಳ್ಳ, ಪ್ರೀತಿ, ಕಾಳಜಿ ತೋರಿಸುವ ಮನಸ್ಸುಗಳ ಹುಡುಕಾಟ ನಡೆಸಿ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಕೆಲವರು, ಸಂಗಾತಿಯ ಹಿನ್ನೆಲೆ ತಿಳಿಯುವುದು, ಕುಟುಂಬದ ಸದಸ್ಯರೊಟ್ಟಿಗೆ ಮಾತುಕತೆ ನಡೆಸಿ ಮುಂದುವರೆಯುವ ನಿರ್ಧಾರ ಕೈಗೊಂಡರು.
ಜಾತಿ, ಧರ್ಮದ ಗಡಿ ಇಲ್ಲ: ‘ಲವ್ ಎಗೇನ್ ಕಾರ್ಯಕ್ರಮಕ್ಕೆ ಬರುವ ವಧು–ವರರ ಪೈಕಿ ಶೇ 80ರಷ್ಟು ಮಂದಿ ಜಾತಿ, ಮತ, ಧರ್ಮವನ್ನು ಗಮನಿಸುವುದಿಲ್ಲ. ಪ್ರೀತಿ, ಸ್ನೇಹಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇನ್ನು ಶೇ 20ರಷ್ಟು ಮಂದಿ ಜಾತಿ, ಕುಟುಂಬದ ಹಿನ್ನೆಲೆಗಳನ್ನು ಗಮನಿಸುತ್ತಾರೆ’ ಎಂದು ಅನುಬಂಧ ಫೌಂಡೇಷನ್ ಕಾರ್ಯದರ್ಶಿ ಗೌರಿ ಶಂಕರ್ ತೆಂಗಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುಂಬೈ, ಬೆಂಗಳೂರು, ಬೆಳಗಾವಿ, ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾಸನದಿಂದ ಲವ್ ಎಗೇನ್ ಕಾರ್ಯಕ್ರಮಕ್ಕೆ ಬಂದಿದ್ದರು’ ಎಂದು ಹೇಳಿದರು.
11 ಮಂದಿ ಮದುವೆ ನಿರ್ಧಾರ: ವಿಚ್ಛೇದನ ಪಡೆದಿರುವವರು, ವಿದುರ– ವಿಧವೆಯರು, ಒಂಟಿಯಾಗಿ ಜೀವನ ಸಾಗಿಸುತ್ತಿರುವ 42–78 ವರ್ಷದೊಳಗಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗಿನಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ 297 ಮಂದಿ ಹೆಸರು ನೋಂದಾಯಿಸಿಕೊಂಡರು. ಈ ಪೈಕಿ 28 ಜನರು ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡರು. 11 ಮಂದಿ ಮದುವೆಯಾಗಲು ನಿರ್ಧರಿಸಿದರು. ಗರಿಷ್ಠ ವಯಸ್ಸಾಗಿದ್ದ 71 ವರ್ಷದ ವ್ಯಕ್ತಿಯೊಬ್ಬರು 64 ವರ್ಷದ ಮಹಿಳೆಯನ್ನು ಆಯ್ಕೆ ಮಾಡಿಕೊಂಡರು.
ಈಡೇರದ ವೃದ್ಧ ದಂಪತಿ ಆಸೆ: ಬೆಂಗಳೂರಿನ ನಿವಾಸಿಯಾಗಿರುವ ಮಹಿಳೆಯೊಬ್ಬರು 56 ವರ್ಷದ ತನ್ನ ತಾಯಿಗೆ ಗಂಡು ಹುಡುಕಿಕೊಂಡು ಬಂದಿದ್ದರು. ತಾಯಿಗೆ ಸೂಕ್ತವಾದ ವರನನ್ನು ಹುಡುಕುವಲ್ಲಿ ಅವರು ಸಫಲರಾದರು. ಆ ಮಹಿಳೆಯ ಪ್ರಯತ್ನಕ್ಕೆ ಅವರ ಪತಿ ಸಾಥ್ ನೀಡಿದರು.
ಧಾರವಾಡದಿಂದ ಬಂದಿದ್ದ 82 ವರ್ಷದ ಅಜ್ಜ ಹಾಗೂ 75 ವರ್ಷದ ಅಜ್ಜಿ ತನ್ನ 52 ವರ್ಷದ ಮಗನಿಗೆ (ವಿದುರ) ಹೆಣ್ಣು ಹುಡುಕಾಟದಲ್ಲಿ ತೊಡಗಿದ್ದರು. ಒಂದೆರಡು ಹೆಣ್ಣುಗಳನ್ನು ನೋಡಿದರು. ಆದರೆ, ಅವರ ಮಗನಿಗೆ ತಕ್ಕುದಾದ ಹೆಣ್ಣು ಸಿಗಲಿಲ್ಲವಂತೆ. ಹೀಗಾಗಿ ವರನ ಮಾಹಿತಿ ಇದ್ದ ಕಡತವನ್ನು ಅನುಬಂಧ ಫೌಂಡೇಷನ್‌ಗೆ ನೀಡಿ ತೆರಳಿದರು.
ಕರ್ನಾಟಕ
Comments are closed.