ಕರ್ನಾಟಕ

ಮರಕ್ಕೆ ಕೊಡಲಿ ಪಾಲಿಕೆ ಕಡಿವಾಣ

Pinterest LinkedIn Tumblr

trees2clrಬೆಂಗಳೂರು, ಜೂ. ೧೭ – ನಗರದಲ್ಲಿ ಇನ್ನು ಮುಂದೆ ಸರ್ಕಾರದ ನಾನಾ ಇಲಾಖೆಗಳಾಗಲಿ ಅಥವಾ ನಾಗರಿಕರಾಗಲಿ ಎಲ್ಲೆಂದರಲ್ಲಿ ಮರ ಕತ್ತರಿಸುವಂತಿಲ್ಲ. ಅಗತ್ಯ – ಅನಗತ್ಯವಾಗಿ ಮರ ಕಡಿಯುವ ಪ್ರವೃತ್ತಿಗೆ ಬಿಬಿಎಂಪಿ ಕಡಿವಾಣ ಹಾಕಲು ನಿರ್ಧರಿಸಿದೆ. ಮರಗಳನ್ನು ಕಡಿಯಲು ಅನುಮತಿ ಪಡೆದುಕೊಳ್ಳಲು ಅರಣ್ಯ ಘಟಕ ಪರಿಸರವಾದಿಗಳ ಸಮಿತಿಯನ್ನು ರಚನೆ ಮಾಡಿದೆ.
ಒಂದು ವೇಳೆ ಮರಗಳನ್ನು ಕಡಿಯಬೇಕಾದರೆ ಈ ಸಮಿತಿಯ ಅನುಮೋದನೆಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿನಿತ್ಯ ಮರಗಳ ಮಾರಣಹೋಮ ನಡೆಯುತ್ತಲೇ ಇದೆ. ಬೆಳಿಗ್ಗೆಯಿದ್ದ ಮರ ರಾತ್ರಿ ಕಳೆದು ಬೆಳಗಾಗುವುದರೊಳಗೆ ಇಲ್ಲದಂತಾಗಿದೆ.
ಮೆಟ್ರೋ ಕಾಮಗಾರಿ ಹೆಸರಿನಲ್ಲೂ ಕೂಡ ಸಾವಿರಾರು ಮರಗಳು ನೆಲ ಕಚ್ಚಿವೆ. ಹಾಗಾಗಿ ಬಿಬಿಎಂಪಿ ಪರಿಸರವಾದಿಗಳ ಮೊರೆ ಹೋಗಿದ್ದು, ಇದಕ್ಕಾಗಿ ಸಮಿತಿಯನ್ನು ರಚಿಸಿದೆ.
ಹೈಕೋರ್ಟ್ ಆದೇಶದಂತೆ ಮರಗಳನ್ನು ಕಡಿಯಲು ಈ ಸಮಿತಿ ಅನುಮತಿ ನೀಡಬೇಕು. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಮರ ಕಡಿಯುವಂತಿಲ್ಲ.
ಸಮಿತಿಯಲ್ಲಿ ಐಐಎಸ್‌ಸಿ ವಿಜ್ಞಾನಿ ಟಿ.ವಿ. ರಾಮಚಂದ್ರ, ಪ್ರಾಜೆಕ್ಟ್ ಫೌಂಡೇಷನ್‌ನ ವಿಜಯನಿಶಾಂತ್, ಅಜಂಪ್ರೇಮ್‌ಜಿ ಫೌಂಡೇಷನ್‌ನ ಡಾ. ಹರಿಣಿ ನಾಗೇಂದ್ರ, ಇಕೋ ವಾಚ್‌ನ ಅಕ್ಷಯ್ ಹೆಬ್ಳೀಕರ್, ಬೆಂಗಳೂರು ಪರಿಸರ ಸಂಸ್ಥೆಯ ನಿತ್ಯಾನಂದ, ಸದಾನಂದ ಹೆಗಡೆ, ಬಿ.ಟಿ. ದೇವರೆ ಅವರನ್ನು ಒಳಗೊಂಡ ಸಮಿತಿಯಲ್ಲಿ ಆಯಾ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಇರುತ್ತಾರೆ.
ಮೆಟ್ರೋ ಕಾಮಗಾರಿ ಅಥವಾ ರಸ್ತೆ ಅಗಲೀಕರಣ ಹೆಸರಿನಲ್ಲಿ ಕನಿಷ್ಠ 50 ಮರಗಳನ್ನು ಕಡಿಯಬೇಕಾದ್ದಲ್ಲಿ ಈ ಸಮಿತಿಯ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು. ಸಮಿತಿಯು ಸ್ಥಳ ಪರೀಶೀಲನೆ ನಡೆಸಿ ಅಗತ್ಯ ಬಿದ್ದಲ್ಲಿ ಮಾತ್ರವೇ ಅನುಮತಿಯನ್ನು ನೀಡಲಿದೆ. ಅನುಮತಿ ನಿರಾಕರಿಸಿದರೆ ಮರ ಕಡಿಯುವಂತಿಲ್ಲ.
ನಗರದ ಅಭಿವೃದ್ಧಿಗೆ ರಸ್ತೆಯ ಅಗಲೀಕರಣ, ಮೆಟ್ರೋ ಕಾಮಗಾರಿಗಳನ್ನು ಪಾಲಿಕೆ ಮತ್ತು ಸರ್ಕಾರ ಕೈಗೆತ್ತಿಕೊಳ್ಳಲಿವೆ. ಇದೇ ವೇಳೆ ಬಿಬಿಎಂಪಿ ಸಮಿತಿಯನ್ನು ರಚನೆ ಮಾಡಿರುವುದು ಎಷ್ಟರ ಮಟ್ಟಿಗೆ ಮರಗಳನ್ನು ಕಡಿಯಲು ಈ ಸಮಿತಿ ಅನುಮತಿ ನೀಡುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಮೈಸೂರು ರಸ್ತೆ, ಕನಕಪುರ ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿಗಾಗಿ ಅಡ್ಡಿಯಾಗಿರುವ ಮರಗಳನ್ನು ಕಡಿಯಲು ಮೆಟ್ರೋ ನಿಗಮ ಮುಂದಾಗಿದೆ. ಸಮಿತಿಯಲ್ಲಿ ಬಹುತೇಕ ಮಂದಿ ಪರಿಸರವಾದಿಗಳೇ ಇದ್ದಾರೆ. ಅವರು ಮರಗಳನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಯಕ್ಷಪ್ರಶ್ನೆಯಾಗಿದೆ.

Comments are closed.