
ಬೆಂಗಳೂರು, ಜೂ. ೧೭- ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಅನಿಶ್ಚಿತತೆಯ ಮುಸುಕು ಕವಿದಂತಿದೆ. ಇಂದು ನಾಳೆ ಎಂಬಂತೆ ದಿನ ಎಣಿಸುವಂತಾಗಿದೆ. ಹುರುಪು- ಹುಮ್ಮಸ್ಸಿನಿಂದ ದೆಹಲಿಯ ವಿಮಾನ ಏರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಪುನರ್ ರಚನೆಗೆ ಹೈಕಮಾಂಡ್‌ನಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ನಿನ್ನೆಯಿಂದ ದೆಹಲಿಯಲ್ಲಿ ಮೊಕ್ಕಾಂ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಸಂಪುಟ ಪುನರ್ ರಚನೆಯ ಸ್ಪಷ್ಟ ಚಿತ್ರಣ ದೊರೆಯಲಿದೆ.
ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ದಿಗ್ವಿಜಯ್ ಸಿಂಗ್ ರವರುಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸೋನಿಯಾ ಗಾಂಧಿ ಅವರ ಭೇಟಿಗೆ ಸಂಜೆ ಸಮಯ ನಿಗದಿಯಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಬರುವ ಸೋಮವಾರದ ವೇಳೆಗೆ ಸಂಪುಟ ಪುನರ್ ರಚನೆಯಾಗಲಿದೆ. ಇಲ್ಲವೇ ಮತ್ತಷ್ಟು ವಿಳಂಬವಾಗುವುದು ಖಚಿತ.
ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಸಿ ಸಂಪುಟ ಪುನರ್ ರಚನೆಗೆ ಸೋನಿಯಾ ಗಾಂಧಿ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಸಂಪುಟ ಪುನರ್ ರಚನೆ, ಇಲ್ಲದಿದ್ದರೆ ಇನ್ನು ಎರಡು ತಿಂಗಳು ಸಂಪುಟ ಪುನರ್ ರಚನೆ ಮುಂದಕ್ಕೆ ಹೋಗಲಿದೆ.
ಖರ್ಗೆ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋನಿಯಾ ಭೇಟಿ ಮಾಡುವುದಕ್ಕೆ ಮೊದಲೇ ಇಂದು ಮಧ್ಯಾಹ್ನ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಭೇಟಿಯ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಸಂಪುಟ ಪುನರ್ ರಚನೆಯ ಬಗ್ಗೆ ಖರ್ಗೆಯ ಅಭಿಪ್ರಾಯವನ್ನು ಕೇಳಿ ಸಂಪುಟ ಪುನರ್ ರಚನೆಯ ಅಗತ್ಯತೆಯ ಬಗ್ಗೆ ಸಮಾಲೋಚಿಸಿದರು ಎನ್ನಲಾಗಿದೆ.
ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಕೆಲ ಹಿರಿಯ ಸಚಿವರನ್ನು ಕೈಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತನೆಗೆ ಖರ್ಗೆ ವರಿಷ್ಠರ ಮುಂದೆ ಅಪಸ್ವರ ವ್ಯಕ್ತಪಡಿಸಿದರು ಎಂದು ಕಾಂಗ್ರೆಸ್‌ನ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಖರ್ಗೆ ಅವರ ಅಭಿಪ್ರಾಯಕ್ಕೆ ಹೈಕಮಾಂಡ್‌ನಲ್ಲಿ ವಿಶೇಷ ಮಹತ್ವ ಇರುವುದರಿಂದ ಪುನರ್ ರಚನೆ ಅನುಮಾನಗಳು ದಟ್ಟೈಸಿವೆ.
ಇಂದು ಸೋನಿಯಾ ಗಾಂಧಿ ಅವರು ಸಂಪುಟ ಪುನರ್ ರಚನೆಗೆ ಒಪ್ಪಿಗೆ ನೀಡದಿದ್ದರೆ ಮತ್ತೆ ಸೋನಿಯಾ ಅವರ ಭೇಟಿ ಮಾಡಲು 15-20 ದಿನಗಳು ಕಾಯಬೇಕು. ಕಾರಣ ಸೋನಿಯಾ ಗಾಂಧಿ ಅವರು ವೈದ್ಯಕೀಯ ತಪಾಸಣೆಗಾಗಿ ಇಂದು ಮಧ್ಯರಾತ್ರಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಜೂನ್ 4 ರಿಂದ ಆಷಾಢ ಮಾಸ ಆರಂಭವಾಗಲಿದ್ದು, ವಿಧಾನ ಮಂಡಲದ ಅಧಿವೇಶನವು ಆರಂಭವಾಗಲಿದೆ. ಹಾಗಾಗಿ ಸಂಪುಟ ಪುನರ್ ರಚನೆ ಏನಿದ್ದರೂ ಆಗಸ್ಟ್ ನಲ್ಲಿ ಮಾತ್ರ ಸಾಧ್ಯ. ಈ ಎಲ್ಲಾ ಬೆಳವಣಿಗೆಗಳಿಂದ ಸಿಎಂ ಕಾಯುವಂತಾಗಿದೆ. ಆದರೆ ಸಚಿವಾಕಾಂಕ್ಷಿಗಳ ಆತುರ ಕಾತುರ ಹೆಚ್ಚಾಗುತ್ತಿದೆ.
ತಲೆನೋವು
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆಗೆ ದೆಹಲಿಗೆ ಬರುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳ ಲಾಬಿ ತೀವ್ರವಾಗಿದ್ದು, ಸಂಪುಟದಿಂದ ಯಾರನ್ನು ಕೈಬಿಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎಂಬುದು ತಲೆನೋವಾಗಿದೆ.
ದೆಹಲಿಯಲ್ಲಿರುವ ಸಚಿವಾಕಾಂಕ್ಷಿಗಳು ಸಚಿವ ಪಟ್ಟ ಪಡೆಯಲು ಎಲ್ಲಾ ರೀತಿಯ ಒತ್ತಡವನ್ನು ಹೇರಿದ್ದು, ತಮ್ಮ ಗಾಡ್ ಫಾದರ್‌ಗಳಿಗೆ ಪಟ್ಟಕ್ಕಾಗಿ ದುಂಬಾಲು ಬಿದ್ದಿದ್ದಾರೆ. ಈ ನಡುವೆ ಕಾಂಗ್ರೆಸ್‌ನ ಸಂಸದರಾದ ದ್ರುವ ನಾರಾಯಣ್, ಡಿ.ಕೆ. ಸುರೇಶ್, ಚಂದ್ರಪ್ಪ ಇವರುಗಳು ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಡದಂತೆ ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಪರಿಷತ್ತಿಗೆ ಸುಮಲತಾ
ಅಂಬಿ ಷರತ್ತು
ಸಚಿವ ಸಂಪುಟದಿಂದ ವಸತಿ ಸಚಿವ ಅಂಬರೀಷ್‌ರವರಿಗೆ ಕೊಕ್ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾಪಕ್ಕೆ ರೆಬಲ್ ಸ್ಟಾರ್ ಬಂಡಾಯವೆದಿದ್ದು, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯೊಂದಿಗೆ ಸಮಾಲೋಚನೆ ನಡೆಸಿ ತಮ್ಮ ಅಸಮಾಧಾನ ಹೊರ ಹಾಕಿ ಕೆಲ ಷರತ್ತು ಹಾಕಿದ್ದಾರೆ.
ಸಂಪುಟ ಪುನರ್ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿಸಿರುವ ಪಟ್ಟಿಯಲ್ಲಿ ಸಚಿವ ಅಂಬರೀಷ್, ಶ್ರೀನಿವಾಸ್ ಪ್ರಸಾದ್ ರವರುಗಳ ಹೆಸರುಗಳು ಕೈಬಿಡುವ ಪಟ್ಟಿಯಲ್ಲಿದ್ದು, ಈ ಬಗ್ಗೆ ಮಾಹಿತಿಗಳು ಹೊರಬರುತ್ತಿದ್ದಂತೆಯೇ ಈ ಇಬ್ಬರೂ ಸಚಿವರು ಸಿಎಂ ವಿರುದ್ಧ ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಈಗ ರೆಬಲ್ ಸ್ಟಾರ್ ಅಂಬರೀಷ್ ಸಿಟ್ಟಿಗೆದ್ದಿದ್ದು, ಮುಖ್ಯಮಂತ್ರಿ ಜೊತೆ ದೂರವಾಣಿಯಲ್ಲೂ ಮಾತನಾಡಿದರು ಎನ್ನಲಾಗಿದೆ. ಒಂದು ವೇಳೆ ಸಂಪುಟದಿಂದ ಹೋಗಲೇ ಬೇಕು ಎಂದರೆ ತಮ್ಮ ಪತ್ನಿ ಸುಮಲತಾ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಬೇಕು ಎಂಬ ಷರತ್ತನ್ನು ರೆಬಲ್ ಸ್ಟಾರ್ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
Comments are closed.